ಸಾರಾಂಶ
ಭಟ್ಕಳ: ಪಟ್ಟಣದ ರಾಘವೇಂದ್ರ ಮಠದ ಸಭಾ ಭವನದಲ್ಲಿ ಏರ್ಪಡಿಸಲಾದ ಮೂರು ದಿನಗಳ ಹಲಸು ಮತ್ತು ಹಣ್ಣಿನ ಮೇಳಕ್ಕೆ ಚಂದ್ರ ಬೊಕ್ಕೆ ಹಲಸಿನ ಹಣ್ಣನ್ನು ಕತ್ತರಿಸುವ ಮುಖಾಂತರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ ಹೆಬ್ಬಾರ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಹಲಸು ಸೇರಿದಂತೆ ಕೃಷಿ ಉತ್ಪನ್ನದ ಮೇಳದಿಂದ ಕೃಷಿಕರಿಗೆ ಉತ್ತಮ ಮಾರುಕಟ್ಟೆ ಒದಗಿಸುವುದರ ಜತೆಗೆ ಆದಾಯದ ವೃದ್ಧಿಗೆ ಅನುಕೂಲವಾಗಿದೆ. ಹಲಸಿನ ಮರದಲ್ಲಿ ಆಗುವ ಹಣ್ಣುಗಳು ಗ್ರಾಮೀಣ ಭಾಗದಲ್ಲಿ ಉಪಯೋಗಿಸದೇ ಕೊಳೆತು ಹೋಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುವುದನ್ನು ಪರಿಚಯಿಸುವ ಮೂಲಕ ಮಾರುಕಟ್ಟೆ ದೊರೆಯುವುದಕ್ಕೆ ಹಲಸಿ ಮೇಳ ಬಹಳಷ್ಟು ಅನುಕೂಲವಾಗಿದೆ. ಭಟ್ಕಳದಲ್ಲಿ ಪ್ರಪ್ರಥಮ ಬಾರಿಗೆ ಮಾಡಿದ ಹಲಸಿನ ಮೇಳ ಅತ್ಯಂತ ಯಶಸ್ವಿಯಾಗಿದೆ ಎಂದರು.ಕಾರ್ಯಕ್ರಮದ ಆಯೋಜಕರಲ್ಲಿ ಓರ್ವರಾದ ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ಮಾತನಾಡಿ, ಹಲಸಿನ ಮೇಳವನ್ನು ಸಂಘಟಿಸುವ ಕುರಿತು ಗೊಂದಲವಿತ್ತು. ಆದರೆ ಬಾರಕೂರಿನ ಗಣೇಶ ಶೆಟ್ಟಿಯವರು ಮೇಳವನ್ನು ಆಯೋಜಿಸಲು ಕೇಳಿಕೊಂಡರು. ಆಯೋಜನೆಯಿಂದ ಸಂತಸವಾಗಿದೆ. ಬೆಳಿಗ್ಗೆಯಿಂದ ಭಾರೀ ಮಳೆಯಿದ್ದರೂ ಕೂಡಾ ಹಲಸಿನ ಮೇಳಕ್ಕೆ ಬೇರೆ ಬೇರೆ ಕಡೆಯಿಂದ ಜನರು ಬರುತ್ತಿರುವುದನ್ನು ನೋಡಿ ಇದೊಂದು ಯಶಸ್ವಿ ಮೇಳವಾಗಿದೆ. ಭಾರೀ ಮಳೆಯ ಮಧ್ಯೆಯೂ ಜನರು ಹಲಸಿನ ಮೇಳಕ್ಕೆ ಆಸಕ್ತಿಯಿಂದ ಬಂದಿರುವುದು ಖುಷಿ ತಂದಿದೆ ಎಂದರು.
ಸಂಘಟಕ ಸ್ಪಂದನಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ, ಕೃಷಿ ಉತ್ಪನ್ನಗಳ ಮೇಳವನ್ನು ಆಯೋಜನೆ ಮಾಡುತ್ತೇವೆ ಎಂದಾಗ ಒಮ್ಮೆ ಯೋಚಿಸುವಂತಾಗಿತ್ತು. ಆದರೆ ಇಂದು ಇಲ್ಲಿನ ಹಲಸಿನ ಉತ್ಪನ್ನಗಳನ್ನು ಹಾಗೂ ಮೇಳವನ್ನು ನೋಡಿ ಸಂತಸವಾಗಿದೆ ಎಂದರು.ಹಲಸು ಮೇಳದ ಉದ್ಘಾಟನೆಯಲ್ಲಿ ಕಿರಣ್ ಬಾರಕೂರು, ಗಣೇಶ ಶೆಟ್ಟಿ ಕುಂದಾಪುರ, ಭಾಸ್ಕರ ಪೂಜಾರಿ, ಪತ್ರಕರ್ತ ರಾಧಾಕೃಷ್ಣ ಭಟ್ಟ, ಜಾಲಿ ಪಪಂ ಸದಸ್ಯ ಮಿಸ್ಬಾವುಲ್ ಹಕ್, ರಾಘವೇಂದ್ರ ಮಠದ ಧರ್ಮದರ್ಶಿ ಗಣಪತಿ ಪ್ರಭು, ಕಿರಣ್ ಕಾಯ್ಕಿಣಿ, ಮುಂತಾದವರು ಮಾತನಾಡಿದರು. ತಾಲ್ಲೂಕಿನಲ್ಲಿ ಡ್ರಾಗನ್ ಫ್ರುಟ್ಸ್ ಬೆಳೆದು ಯಶಸ್ವೀಯಾದ ಅನಿಲ್ ನಾಯ್ಕ ದಂಪತಿಗಳನ್ನು ಕಾರ್ಯಕ್ರಮದ ಆಯೋಜಕರು ಸನ್ಮಾನಿಸಲಾಯಿತು. ಆಯೋಜನೆ ಮಾಡಿದ ಗಣೇಶ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತ ಈಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಹಲಸಿನ ಮೇಳದಲ್ಲಿ ಚಂದ್ರ ಬೊಕ್ಕೆ ಹಲಸಿನ ಹಣ್ಣು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಸಿಹಿ ಮತ್ತು ಅತ್ಯಂತ ರುಚಿಕರವಾದ ಹಣ್ಣನ್ನು ಮೇಳಕ್ಕೆ ಬಂದ ಪ್ರತಿಯೊಬ್ಬರೂ ಕೂಡಾ ಖರೀಧಿ ಮಾಡುತ್ತಿರುವುದು ಕಂಡು ಬಂತು. ಮೇಳದಲ್ಲಿ ಹಲಸು, ಮಾವು ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು ಆಕರ್ಷಣೆಯ ಕೇಂದ್ರವಾಗಿದ್ದವು. ಮೇಳದಲ್ಲಿ ಬಗೆ ಬಗೆಯ 70 ಸ್ಟಾಲ್ ಗಳನ್ನು ಹಾಕಲಾಗಿತ್ತು. ಸಂಜೆಯ ನಂತರ ಜನರು ಹಲಸಿನ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಜುಲೈ 20ರ ವರೆಗೂ ಹಲಸಿನ ಮೇಳ ಇರಲಿದ್ದು, ಶನಿವಾರ ಮತ್ತು ಭಾನುವಾರ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದೆ. ಶುಕ್ರವಾರ ಹಲಸಿನ ಮೇಳಕ್ಕೆ ತಾಲ್ಲೂಕಿನವರಷ್ಟೇ ಅಲ್ಲದೇ ಜಿಲ್ಲೆಯ ವಿವಿಧ ತಾಲ್ಲೂಕಿನಿಂದಲೂ ಜನರು ಆಗಮಿಸಿದ್ದು ವಿಶೇಷವಾಗಿತ್ತು.