ಸಾರಾಂಶ
ವಯನಾಡ್: ಕಂಡು ಕೇಳರಿಯದ ಭೂಕುಸಿತ ಕಂಡ ಕೇರಳದ ವಯನಾಡ್‌ನಲ್ಲಿ 6ನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ ದಿನಗಳೆದಂತೆ ಅವಶೇಷಗಳ ಅಡಿ ಸಿಲುಕಿದವರು ಬದುಕಿರಬಹುದು ಬಗ್ಗೆ ಆಶಾಭಾವನೆ ಕ್ಷೀಣಿಸಿದೆ. ಭಾನುವಾರ ಚಾಲಿಯಾರ್ ನದಿಯಲ್ಲಿ ಹಲವು ಶವಗಳು ಪತ್ತೆ ಆಗಿದ್ದು, ಮೃತರ ಸಂಖ್ಯೆ 380ಕ್ಕೆ ಏರಿದೆ.ಭಾನುವಾರ ಮತ್ತಷ್ಟು ರಕ್ಷಣಾ ಸಿಬ್ಬಂದಿ ಹಾಗೂ ಯಂತ್ರಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆಯಾದರೂ, ನಾಪತ್ತೆ ಆದ 206 ಜನರು 6 ದಿನ ಆದರೂ ಪತ್ತೆ ಆಗಿಲ್ಲ. ಹೀಗಾಗಿ ಬದುಕಿರಬಹುದು ಸಾಧ್ಯತೆ ಕ್ಷೀಣಿಸಿದೆ.1208 ಮನೆಗಳು 4 ಹಳ್ಳಿಗಳಲ್ಲಿ ನಾಶ ಆಗಿವೆ ಹಾಗೂ 3700 ಎಕರೆ ಕೃಷಿ ಭೂಮಿ ನಾಶವಾಗಿದೆ.
ವಯನಾಡಲ್ಲೀಗ ದುರಂತ ಪ್ರವಾಸೋದ್ಯಮದ ಹಾವಳಿ
ಮೆಪ್ಪಾಡಿ: ಭೂಕುಸಿತದಿಂದ ವಯನಾಡು ಜಿಲ್ಲೆಯ ಹಲವು ಗ್ರಾಮಗಳು ಸಂಪೂರ್ಣ ಭೂಸಮಾಧಿಯಾಗಿ ಜನರು ಸಂಕಷ್ಟ ಪಡುತ್ತಿದ್ದರೆ, ಅದೇ ಪ್ರದೇಶದಲ್ಲೀಗ ದುರಂತ ಪ್ರವಾಸೋದ್ಯಮ ಆರಂಭವಾಗಿದೆ. ಇದು ಘಟನಾ ಸ್ಥಳದಲ್ಲಿನ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಮಾಡಿದೆ.ಭೂಕುಸಿತ ಸಂಭವಿಸಿರುವ ಪ್ರದೇಶಕ್ಕೆ ಸ್ಥಳೀಯರು ಮತ್ತು ನೆರೆ ರಾಜ್ಯಗಳ ಪ್ರವಾಸಿಗರು ರಾತ್ರೋರಾತ್ರಿ ಆಗಮಿಸುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರು, ಸಾಮಾಜಿಕ ಜಾಲತಾಣಗಳಲ್ಲಿ ವಯನಾಡಿನ ದುರಂತ ಪ್ರವಾಸೋದ್ಯಮದ ಬಗ್ಗೆ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಉದ್ದೇಶದಿಂದ ಚಿತ್ರೀಕರಣಗಳನ್ನು ನಡೆಸುತ್ತಿದ್ದಾರೆ. ಜೊತೆಗೆ ರೀಲ್ಸ್ ಮಾಡುತ್ತಾ ಸಾಮಾಜಿಕ ಪ್ರಜ್ಞೆಯನ್ನೇ ಕಳೆದುಕೊಂಡವರಂತೆ ವರ್ತಿಸುತ್ತಾ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದ್ದಾರೆ.
ವಯನಾಡ್ ದುರಂತಕ್ಕೆ ರಾಷ್ಟ್ರೀಯ ಸ್ಥಾನ: ಬಿಜೆಪಿಯೊಳಗೇ ಭಿನ್ನ ರಾಗ
ವಯನಾಡ್/ತಿರುವನಂತಪುರವಯನಾಡ್ ಭೀಕರ ಭೂಕುಸಿತ ಘಟನೆಯನ್ನು ರಾಷ್ಟ್ರೀಯ ದುರಂತ ಎಂದು ಘೋಷಿಸಬೇಕೆಂಬ ಬೇಡಿಕೆಗಳ ಕುರಿತು ಬಿಜೆಪಿಯೊಳಗೇ ಭಿನ್ನ ಧ್ವನಿ ವ್ಯಕ್ತವಾಗಿದೆ.
ಈ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಕೇರಳದವರೇ ಆಗಿರುವ ಕೇಂದ್ರ ಸಚಿವ ಹಾಗೂ ಚಿತ್ರನಟ ಸುರೇಶ್ ಗೋಪಿ ಭರವಸೆ ನೀಡಿದ್ದಾರೆ. ಆದರೆ, ಅಂತಹ ಪರಿಕಲ್ಪನೆಯೇ ಕೇಂದ್ರ ಸರ್ಕಾರದಲ್ಲಿ ಇಲ್ಲ ಎಂದು ಕೇರಳ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ವಿ. ಮುರಳೀಧರನ್ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.ವಯನಾಡ್ ದುರಂತ ಸ್ಥಳಕ್ಕೆ ಬೇಡಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೊಂದು ನಿಜವಾಗಿಯೂ ರಾಷ್ಟ್ರೀಯ ದುರಂತ. ಸರ್ಕಾರ ಏನು ಮಾಡುತ್ತೋ ನೋಡೋಣ ಎಂದಿದ್ದರು.
ಭಾನುವಾರ ದುರಂತ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಸುರೇಶ್ ಗೋಪಿ, ತೀವ್ರತೆಯನ್ನು ಅಧ್ಯಯನ ಮಾಡಿದ ಬಳಿಕ ರಾಷ್ಟ್ರೀಯ ದುರಂತ ಬೇಡಿಕೆ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.
ಈ ನಡುವೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಮುರಳೀಧರನ್, ಒಂದು ದುರಂತವನ್ನು ರಾಷ್ಟ್ರೀಯ ದುರಂತವಾಗಿ ಘೋಷಿಸುವ ಪರಿಕಲ್ಪನೆಯೇ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಲ್ಲಿ ಇಲ್ಲ. ಯುಪಿಎ ಅವಧಿಯಿಂದಲೂ ಈ ನಿಯಮದಲ್ಲಿ ಬದಲಾವಣೆಯಾಗಿಲ್ಲ ಎಂದು 2013ರಲ್ಲಿ ಕೇಂದ್ರ ಸಚಿವರಾಗಿದ್ದ ಮುಲ್ಲಪಲ್ಲಿ ರಾಮಚಂದ್ರನ್ ಅವರು ಸಂಸತ್ತಿಗೆ ನೀಡಿದ್ದ ದಾಖಲೆಯನ್ನು ಲಗತ್ತಿಸಿದ್ದಾರೆ.
ಕುಸಿದ ಮನೆ, ನಿರಾಶ್ರಿತ ಕೇಂದ್ರಗಳ ಮೇಲೆ ಕಳ್ಳರ ದಾಳಿ
ಮೆಪ್ಪಾಡಿ: ವಯನಾಡಿನಲ್ಲಿ ಭೂಕುಸಿತದಿಂದ ನಲುಗಿ ಹೋಗಿರುವ ಸಂತ್ರಸ್ತರಿಗೆ ಇದೀಗ ಕಳ್ಳರ ಕಾಟ ಶುರುವಾಗಿದೆ. ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತರ ಮನೆಗಳಿಗೆ ನುಗ್ಗಿ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದಾರೆ.ಹೌದು, ದುರಂತದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾಗಿರುವವರು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇದನ್ನು ಬಂಡವಾಳವಾಗಿಸಿಕೊಂಡಿರುವ ಖದೀಮರು, ಜನವಸತಿ ಇಲ್ಲದ ಕಾರಣ, ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಸಂತ್ರಸ್ತರಿಂದ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರದೇಶಗಳಲ್ಲಿ ಗಸ್ತು ಆರಂಭಿಸಿದ್ದು, ರಾತ್ರಿ ವೇಳೆ ಭೂಕುಸಿತ ಪೀಡಿತ ಪ್ರದೇಶದಲ್ಲಿ ಓಡಾಟ ನಡೆಸದಂತೆ ನಿರ್ಬಂಧ ವಿಧಿಸಿದೆ.ಇನ್ನೊಂದೆಡೆ ಬೆಳಗ್ಗೆ ಹೊತ್ತಿನಲ್ಲಿ ಸಂತ್ರಸ್ತರು ತಮ್ಮ ವಾಸಸ್ಥಳಕ್ಕೆ ತೆರಳಿದ ವೇಳೆ ನಿರಾಶ್ರಿತ ಕೇಂದ್ರಗಳಲ್ಲಿನ ಅವರ ವಸ್ತುಗಳನ್ನು ಕದಿಯುತ್ತಿದ್ದಾರೆ. ಇಂಥ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ.
ಜನವಸತಿಗೆ ಮುಂಡಕ್ಕೈ ಇನ್ನೆಂದೂ ಸೂಕ್ತವಲ್ಲ:ಕಲ್ಪೆಟ್ಟಾ ‘ಕೈ’ ಶಾಸಕ
ವಯನಾಡ್: ಭೀಕರ ಭೂಕುಸಿತದಿಂದ ನಲುಗಿರುವ ಮುಂಡಕ್ಕೈ ಪ್ರದೇಶ ಜನವಸತಿಗೆ ಎಂದಿಗೂ ಯೋಗ್ಯವಲ್ಲ. ಹೀಗಾಗಿ ವೈಜ್ಞಾನಿಕವಾಗಿ ಸಂತ್ರಸ್ತರಿಗೆ ಪುನಾವಸತಿ ಕಲ್ಪಿಸಬೇಕಾಗಿದೆ ಎಂದು ಕಲ್ಪೆಟ್ಟ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ. ಸಿದ್ದಿಖಿ ಹೇಳಿದ್ದಾರೆ. ಈ ಬಾರಿ ಸಂಭವಿಸಿರುವ ದುರಂತ ನಾವು ಈವರೆಗೆ ನೋಡಿದ್ದಕ್ಕಿಂತ ಭೀಕರವಾಗಿದೆ. ಸರ್ಕಾರ ಹೇಳುತ್ತಿರುವುದಕ್ಕಿಂತ ಹೆಚ್ಚಿನ ಜನರು ನಾಪತ್ತೆಯಾಗಿದ್ದಾರೆ ಹಾಗೂ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ. ವಯನಾಡ್ ವಿಶಿಷ್ಟ ಭೌಗೋಳಿಕ ಪರಿಸರವನ್ನು ಹೊಂದಿದೆ. ಬೆಟ್ಟಗಳು ಹಾಗೂ ಕಣಿವೆಗಳು ಇಲ್ಲಿವೆ. ಕಣಿವೆಯಲ್ಲಿರುತ್ತೀರೋ ಅಥವಾ ಬೆಟ್ಟದ ಮೇಲೆ ಇರುತ್ತೀರೋ ಭೂಕುಸಿತ ಎಂಬುದು ಕಳವಳಕಾರಿ ವಿಷಯ. ಭೂಕುಸಿತ ಸಂಭವಿಸಿದ ಕಲ್ಲಾಡಿ ಪ್ರದೇಶ ಅತಿ ಹೆಚ್ಚು ಮಳೆಯಾಗುವ ಸ್ಥಳಗಳಲ್ಲಿ ಒಂದಾಗಿದೆ. ಅಷ್ಟೊಂದು ನೀರನ್ನು ಭೂ ಪರಿಸರ ಹೀರಿಕೊಳ್ಳುವುದಿಲ್ಲ. ಹೀಗಾಗಿ ಭೂಕುಸಿತದಂತಹ ವಿಪತ್ತು ಆಗುತ್ತಿವೆ ಎಂದಿದ್ದಾರೆ.