ಸಾರಾಂಶ
ತ್ರಿಶೂರ್: ಚಿನ್ನ ಉತ್ಪಾದನೆಗೆ ಹೆಸರುವಾಸಿಯಾಗಿರುವ ಕೇರಳದ ತ್ರಿಶೂರ್‌ನ ಕೆಲ ಚಿನ್ನಾಭರಣ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ ರಾಜ್ಯದ ಜಿಎಸ್‌ಟಿ ಅಧಿಕಾರಿಗಳು 120 ಕೆಜಿ ದಾಖಲೆರಹಿತ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯದ ಕೆಲ ಜಿಲ್ಲೆಗಳ ಚಿನ್ನ ಉತ್ಪಾದನಾ ಸ್ಥಳಗಳು ಹಾಗೂ ವ್ಯಾಪಾರಿಗಳ ಮನೆಗಳು ಸೇರಿದಂತೆ 78 ಕಡೆಗಳಲ್ಲಿ 700 ಅಧಿಕಾರಿಗಳು ಬುಧವಾರ ಸಂಜೆ ದಾಳಿ ನಡೆಸಿದ್ದು, ಗುರುವಾರದ ತನಕ ಶೋಧ ನಡೆದಿದೆ. ಇದು ರಾಜ್ಯದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆ ಎನ್ನಲಾಗಿದೆ.
ಜಿಎಸ್‌ಟಿಯ ವಿಶೇಷ ಆಯುಕ್ತ ಅಬ್ರಹಾಂ ರೆನ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಚಿನ್ನ ಹೊರತುಪಡಿಸಿ ಬಿಲ್ಲಿಂಗ್ ಹಾಗೂ ತೆರಿಗೆಯಲ್ಲೂ ಅಕ್ರಮ ನಡೆದಿರುವುದು ಪತ್ತೆಯಾಗಿದೆ.
ರಹಸ್ಯ ಕಾರ್ಯಾಚರಣೆ ಹೇಗೆ?:
ರಹಸ್ಯವಾಗಿ ನಡೆದ ಈ ಕಾರ್ಯಾಚರಣೆಯನ್ನು ಗೌಪ್ಯವಾಗಿಡುವ ಸಲುವಾಗಿ ತರಬೇತಿ ನೆಪದಲ್ಲಿ ರಾಜ್ಯದ ಹಲವು ಕಡೆಗಳಿಂದ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದ್ದು, ‘ಶೈಕ್ಷಣಿಕ ಪ್ರವಾಸ’ ಎಂಬ ಬ್ಯಾನರ್ ಅಳವಡಿಸಿದ ಬಸ್ಸುಗಳಲ್ಲಿ ಅವರನ್ನು ವಿವಿಧೆಡೆಗಳಿಗೆ ಕಳಿಸಲಾಗಿತ್ತು.
ಈ ಕಾರ್ಯಾಚರಣೆಗೆ ಟೊರ್ರೆ ಡೆಲ್ ಒರೊ (ಸ್ಪ್ಯಾನಿಶ್‌ನಲ್ಲಿ ಚಿನ್ನದ ಗೋಪುರ) ಎಂದು ಹೆಸರಿಡಲಾಗಿದ್ದು, ಇದು ಮುಂದುವರೆಯಲಿದೆ ಎಂದು ಜಿಎಸ್‌ಟಿಯ ಗುಪ್ತಚರ ಉಪ ಆಯುಕ್ತ ದಿನೇಶ್ ಕುಮಾರ್ ತಿಳಿಸಿದ್ದಾರೆ.