ಸಾರಾಂಶ
ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹೆಂಡತಿಯರನ್ನು ಸರಿಯಾಗಿ ಸಾಕುವ ಸಾಮರ್ಥ್ಯ ಹೊಂದಿಲ್ಲವೆಂದಾದಲ್ಲಿ ಆತ ಮುಸ್ಲಿಂ ಕಾನೂನಿನಲ್ಲಿ ಅವಕಾಶವಿದ್ದರೂ ಬಹುಪತ್ನಿತ್ವ ಹೊಂದುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
3ನೇ ಮದುವೆಗೆ ಮುಂದಾಗಿದ್ದ ಅಂಧ, ಭಿಕ್ಷುಕ ಮುಸ್ಲಿಂ ವ್ಯಕ್ತಿಗೆ ಚಾಟಿಪಿಟಿಐ ಕೊಚ್ಚಿ
ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹೆಂಡತಿಯರನ್ನು ಸರಿಯಾಗಿ ಸಾಕುವ ಸಾಮರ್ಥ್ಯ ಹೊಂದಿಲ್ಲವೆಂದಾದಲ್ಲಿ ಆತ ಮುಸ್ಲಿಂ ಕಾನೂನಿನಲ್ಲಿ ಅವಕಾಶವಿದ್ದರೂ ಬಹುಪತ್ನಿತ್ವ ಹೊಂದುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಕೇರಳದ ಪೆರಿಂತಲ್ಮನ್ನದ ಮುಸ್ಲಿಂ ಮಹಿಳೆಯೊಬ್ಬಳು (39) ಗಂಡನಿಂದ ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ.ವಿ. ಕುನ್ನಿಕೃಷ್ಣನ್ ಅವರಿದ್ದ ಪೀಠ ಈ ರೀತಿ ತಿಳಿಸಿದೆ.
ಏನಿದು ಪ್ರಕರಣ?: ಪಾಲಕ್ಕಾಡ್‌ನ ಅಂಧ ಮುಸ್ಲಿಂ ವ್ಯಕ್ತಿಯೊಬ್ಬ (46) ಮಸೀದಿಯ ಮುಂದೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಈತನಿಗೆ ಇಬ್ಬರು ಹೆಂಡತಿಯರು. 2ನೇ ಹೆಂಡತಿಯೂ ಭಿಕ್ಷೆ ಬೇಡುತ್ತಿದ್ದಳು. ಇತ್ತೀಚೆಗೆ 2ನೇ ಹೆಂಡತಿಗೆ ‘ತಲಾಖ್’ ನೀಡಿ 3ನೇ ಮದುವೆಯಾಗುವುದಾಗಿ ಆತ ಬೆದರಿಸುತ್ತಿದ್ದ. ಇದರಿಂದ ಬೇಸತ್ತ ಆಕೆ ಮಾಸಿಕ 10,000 ರು. ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಕೋರ್ಟ್ ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದಳು.ಹೈಕೋರ್ಟ್ ಹೇಳಿದ್ದೇನು?:‘ಪ್ರತಿವಾದಿಯು ಮುಸ್ಲಿಂ ಸಮುದಾಯಕ್ಕೆ ಸೇರಿದವನು ಮತ್ತು ಅವನು ತನ್ನ ಸಾಂಪ್ರದಾಯಿಕ ಕಾನೂನಿನ ಪ್ರಯೋಜನಗಳನ್ನು ಪಡೆಯುತ್ತಿದ್ದಾನೆ. ಅದು ಅವನಿಗೆ 2 ಅಥವಾ 3 ಬಾರಿ ಮದುವೆಯಾಗಲು ಅನುವು ಮಾಡಿಕೊಡುತ್ತದೆ. ಆದರೆ 2ನೇ ಅಥವಾ 3ನೇ ಹೆಂಡತಿ ಸಾಕುವ ಸಾಮರ್ಥ್ಯವಿಲ್ಲದ ವ್ಯಕ್ತಿಯ ಮತ್ತೊಂದು ಮದುವೆ ಆಗುವುದನ್ನು ಒಪ್ಪಲು ಸಾಧ್ಯವಿಲ್ಲ. ಮುಸ್ಲಿಮರಲ್ಲಿ ಶಿಕ್ಷಣದ ಕೊರತೆ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿನ ಕುರಿತು ತಿಳಿವಳಿಕೆ ಇಲ್ಲದಿರುವುದು ಇಂಥ ಮದುವೆಗಳಿಗೆ ಕಾರಣವಾಗುತ್ತಿದೆ’ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಆ ವ್ಯಕ್ತಿಗೆ ಆಪ್ತ ಸಮಾಲೋಚನೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದೆ.