ಮುಸ್ಲಿಂ ಶಿಕ್ಷಕನಿಂದ ಮೂರ್ತಿ ದೇಣಿಗೆ

| Published : Sep 19 2025, 01:00 AM IST

ಸಾರಾಂಶ

ಕಲ್ಮೇಶ್ವರ ಪ್ರೌಢಶಾಲೆಯ ಶಿಕ್ಷಕ, ಅಣ್ಣಿಗೇರಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಬಿಸಾಹೇಬ ಯಲಬುರ್ಗಿ ಅವರು ₹ 2 ಲಕ್ಷ ವೆಚ್ಚದಲ್ಲಿ ಲಿಂ. ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿಯ ಅಮೃತ ಶಿಲಾಮೂರ್ತಿ ಮಾಡಿಸಿ ಕೊಡುಗೆಯಾಗಿ ನೀಡಿದ್ದಾರೆ.

ಅಣ್ಣಿಗೇರಿ: ಕನ್ನಡ ನೆಲ ಸೌಹಾರ್ಧತೆಯ ತವರು ಎನ್ನುವುದನ್ನು ಆಗಾಗ ಕೂಗಿ ಹೇಳುತ್ತಲೇ ಇದೆ. ಅಂಥದೊಂದು ಕೂಗು ಈಗ ಪಂಪನ ಜನ್ಮಭೂಮಿ ಅಣ್ಣಿಗೇರಿ ನೆಲದಿಂದ ಕೇಳಿಬಂದಿದೆ.

ಇಲ್ಲಿನ ಕಲ್ಮೇಶ್ವರ ಪ್ರೌಢಶಾಲೆಯ ಶಿಕ್ಷಕ, ಅಣ್ಣಿಗೇರಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಬಿಸಾಹೇಬ ಯಲಬುರ್ಗಿ ಅವರು ₹ 2 ಲಕ್ಷ ವೆಚ್ಚದಲ್ಲಿ ಲಿಂ. ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿಯ ಅಮೃತ ಶಿಲಾಮೂರ್ತಿ ಮಾಡಿಸಿ ಕೊಡುಗೆಯಾಗಿ ನೀಡಿದ್ದಾರೆ.

ಇದೇ ಸೆ. 19 (ಶುಕ್ರವಾರ) ರಂದು ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ರಾಜೂರು ಗ್ರಾಮದಲ್ಲಿ ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಈ ಅಮೃತ ಶಿಲಾಮೂರ್ತಿ ಲೋಕಾರ್ಪಣೆಗೊಳ್ಳಲಿದೆ.

ಪಂಡಿತ ಪುಟ್ಟರಾಜ ಗವಾಯಿಗಳ ಕ್ರಿಯಾಮೂರ್ತಿಗಳು, ಅಡ್ನೂರ - ರಾಜೂರು - ಗದಗ ಬ್ರಹನ್ಮಠದ ಲಿಂಗೈಕ್ಯ ಪಂಚಾಕ್ಷರ ಶಿವಾಚಾರ್ಯರು ಉತ್ತರ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ. ಇಂಥ ಶ್ರೀಗಳ ಅಮೃತಶಿಲಾ ಮೂರ್ತಿಯನ್ನು ರಾಜೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಬೇಕು ಎನ್ನುವುದು ಭಕ್ತರ ಸಂಕಲ್ಪವಾದಾಗ ಶ್ರೀಗಳ ಮೂರ್ತಿಯನ್ನು ತಾವು ಮಾಡಿಸಿ ನೀಡುವುದಾಗಿ ಶಿಕ್ಷಕ ನಬಿಸಾಹೇಬ ವಾಗ್ದಾನ ಮಾಡಿದ್ದರು.

ಅದರಂತೆ ₹ 2 ಲಕ್ಷ ವೆಚ್ಚದಲ್ಲಿ ಅಮೃತ ಶಿಲಾಮೂರ್ತಿಯನ್ನು ಮಾಡಿಸಿ ಶ್ರೀಮಠಕ್ಕೆ ಕೊಡುಗೆಯಾಗಿ ನೀಡುವ ಮೂಲಕ ತಮ್ಮ ಗುರುಭಕ್ತಿಯ ಜೊತೆಗೆ ಭಾವೈಕ್ಯತೆ ಮೆರೆದಿದ್ದಾರೆ. ಶಿಕ್ಷಕ ನಬಿಸಾಹೇಬ ಅವರ ಗುರುಭಕ್ತಿ ಮತ್ತು ಭಾವೈಕ್ಯತಾ ಮನೋಭಾವಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.