ಕೇರಳ ವಯನಾಡು ಭೂ ಕುಸಿತಕ್ಕೆ 4 ಹಳ್ಳಿಗಳೇ ನಾಮಾವಶೇಷ 135 ಬಲಿ, 211 ಜನರು ಕಣ್ಮರೆ!

| Published : Jul 31 2024, 02:00 AM IST / Updated: Jul 31 2024, 08:10 AM IST

ಕೇರಳ ವಯನಾಡು ಭೂ ಕುಸಿತಕ್ಕೆ 4 ಹಳ್ಳಿಗಳೇ ನಾಮಾವಶೇಷ 135 ಬಲಿ, 211 ಜನರು ಕಣ್ಮರೆ!
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳದ ಸೌಂದರ್ಯದ ಪ್ರತೀಕವೆಂಬಂತಿರುವ ವಯನಾಡು ಜಿಲ್ಲೆಯಲ್ಲಿ ಮಂಗಳವಾರ ಘೋರ ಭೂಕುಸಿತ ಸಂಭವಿಸಿದ್ದು 4 ಹಳ್ಳಿಹಳು ಸಂಪೂರ್ಣ ಕೊಚ್ಚಿ ಹೋಗಿ ನಾಮಾವಶೇಷ ಆಗಿವೆ.

ವಯನಾಡು: ಕೇರಳದ ಸೌಂದರ್ಯದ ಪ್ರತೀಕವೆಂಬಂತಿರುವ ವಯನಾಡು ಜಿಲ್ಲೆಯಲ್ಲಿ ಮಂಗಳವಾರ ಘೋರ ಭೂಕುಸಿತ ಸಂಭವಿಸಿದ್ದು 4 ಹಳ್ಳಿಹಳು ಸಂಪೂರ್ಣ ಕೊಚ್ಚಿ ಹೋಗಿ ನಾಮಾವಶೇಷ ಆಗಿವೆ. ಈ ಘಟನೆಯಲ್ಲಿ 135 ಜನರು ಸಾವನ್ನಪ್ಪಿ, 211 ಜನ ನಾಪತ್ತೆ ಆಗಿದ್ದಾರೆ. ಪಕ್ಕದ ಕಲ್ಲಿಕೋಟೆ ಜಿಲ್ಲೆಯಲ್ಲೂ ಭೂಕುಸಿತ ಸಂಭವಿಸಿ ಓರ್ವ ನಾಪತ್ತೆ ಆಗಿದ್ದಾನೆ.

ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ವಯನಾಡು ಜಿಲ್ಲೆಯಲ್ಲಿ 37 ಸೆಂ.ಮೀ.ನಷ್ಟು ಹಾಗೂ 48 ಗಂಟೆಗಳಲ್ಲಿ 57 ಸೆಂ.ಮೀ.ನಷ್ಟು ಭಾರೀ ಮಳೆ ಸುರಿದ ಪರಿಣಾಮ ಚೂರಲ್‌ಮಾಲಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಮುಂಜಾನೆ 1 ಗಂಟೆಯಿಂದ 6 ಗಂಟೆಯ ಅವಧಿಯಲ್ಲಿ ಏಕಾಏಕಿ ಭೂಮಿ ಕುಸಿದು ಈ ದುರ್ಘಟನೆ ಸಂಭವಿಸಿದೆ. ಭಾರೀ ಪ್ರಮಾಣದ ಭೂಕುಸಿತ ಉಂಟಾಗಿದೆ.

ಘಟನೆಯಲ್ಲಿ 128 ಜನರಿಗೆ ಗಾಯಗಳಾಗಿವೆ. ಘಟನಾ ಸ್ಥಳದಿಂದ 250ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದ್ದು, ಇನ್ನೂ ನೂರಾರು ಜನರು ಭೂಸಮಾಧಿಯಾಗಿರುವ ಇಲ್ಲವೇ ಅವಶೇಷಗಳ ಅಡಿ ಸಿಲುಕಿಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮನೆ, ಕಟ್ಟಡ, ಮರಗಳ ಅಡಿಯಲ್ಲಿ ಸಿಕ್ಕಿಬಿದ್ದಿರಬಹುದಾದ ಜನರ ರಕ್ಷಣೆಗೆ ಸೇನಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಸ್ಥಳೀಯ ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. 

ಆದರೆ ಸುರಿಯುತ್ತಿರುವ ಭಾರೀ ಮಳೆ, ಭೂಕುಸಿತ ಸಂಭವಿಸಿದ ಪ್ರದೇಶಗಳು ಇತರೆ ಪ್ರದೇಶಗಳಿಂದ ಸಂಪರ್ಕ ಕಡಿದುಕೊಂಡಿರುವುದು ಮತ್ತು ಈಗಲೂ ಅಲ್ಲಲ್ಲಿ ಭೂಕುಸಿತದ ಘಟನೆಗಳು ಮುಂದುವರೆದಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.ಈ ನಡುವೆ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ, ವಯನಾಡು ಕ್ಷೇತ್ರದ ಮಾಜಿ ಸಂಸದ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಯಾಗಿ ಗಣ್ಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ದೂರವಾಣಿ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ರೀತಿಯ ನೆರವಿನ ಭರವಸೆ ನೀಡಿದ್ದಾರೆ.

 ಈ ನಡುವೆ ಭೀಕರ ದುರ್ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಬುಧವಾರ ರಾಜ್ಯದೆಲ್ಲೆಡೆ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲು ಮತ್ತು ಶೋಕಾಚರಣೆ ಆಚರಿಸಲು ಕೇರಳ ರಾಜ್ಯ ಸರ್ಕಾರ ನಿರ್ಧರಿಸಿದೆ.ಕಳೆದ ಕೆಲ ದಿನಗಳಿಂದ ನಿರಂತರ ಮಳೆಗೆ ಸಾಕ್ಷಿಯಾಗಿದ್ದ ವಯನಾಡು ಜಿಲ್ಲೆಯ ಹಲವು ಭಾಗಗಳಲ್ಲಿ ಸೋಮವಾರದಿಂದೀಚೆಗೆ ಭಾರೀ ಮಳೆ ಸುರಿದಿದೆ. ಪರಿಣಾಮ ಜಿಲ್ಲೆಯ ಚೂರಲ್‌ಮಾಲಾ, ಮುಂಡಕ್ಕಾಯ್‌, ಅಟ್ಟಮಲ ಮತ್ತು ನೂಲ್‌ಪುಳ ಗ್ರಾಮಗಳಲ್ಲಿ ಮಂಗಳವಾರ ನಸುಕಿನ ಜಾವ 1 ಗಂಟೆ ವೇಳೆಗೆ ಭೂಕುಸಿದ ಘಟನೆಗಳು ಆರಂಭವಾಗಿದ್ದು 6 ಗಂಟೆಯವೆರಗೂ ಮುಂದುವರೆದಿದೆ. 

ಭೂಕುಸಿದ ಪರಿಣಾಮ ಬೆಟ್ಟಪ್ರದೇಶಗಳಿಂದ ಬಂಡೆಗಳು, ದೊಡ್ಡದೊಡ್ಡ ಮರಗಳು ಭಾರೀ ವೇಗದಲ್ಲಿ ತಗ್ಗುಪ್ರದೇಶಗಳ ಮೇಲೆ ಅಪ್ಪಳಿಸಿದ್ದು ನೂರಾರು ಮನೆ, ಕಟ್ಟಡಗಳು ಭೂಸಮಾಧಿಯಾಗಿವೆ. 

ಪರಿಣಾಮ ಸುಖನಿದ್ದೆಯಲ್ಲಿದ್ದ ನೂರಾರು ಜನರು ಮಲಗಿದ್ದಲ್ಲೇ ಸಾವನ್ನಪ್ಪಿದ್ದರೆ, ಇನ್ನು ಕೆಲವರು ನಾಪತ್ತೆಯಾಗಿದ್ದಾರೆ.ಭೂಕುಸಿತದಲ್ಲಿ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ ಎನ್ನಲಾದ ಚೂರಲ್‌ಮಾಲಾ ಒಂದರಲ್ಲೇ 200ಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿವೆ ಎನ್ನಲಾಗಿದೆ. ಮತ್ತೊಂದೆಡೆ ಮುಂಡಕ್ಕಾಯ್‌ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆ ಕೊಚ್ಚಿಹೋಗಿರುವ ಕಾರಣ ಮಂಗಳವಾರ ಮಧ್ಯಾಹ್ನದವರೆಗೂ ಅಲ್ಲಿಗೆ ರಕ್ಷಣಾ ಸಿಬ್ಬಂದಿ ತೆರಳುವುದು ಸಾಧ್ಯವಾಗಿರಲಿಲ್ಲ. 

ಭೂಕುಸಿತ ಪರಿಣಾಮ ನಾಲ್ಕೂ ಗ್ರಾಮಗಳು, ರಾಜ್ಯದ ಇತರೆ ಪ್ರದೇಶಗಳಿಂದ ಸಂಪರ್ಕ ಕಡಿದುಕೊಂಡಿವೆ. ಇನ್ನೊಂದೆಡೆ ಮಣ್ಣು, ಬಂಡೆ, ಮರಗಳು, ತಗ್ಗುಪ್ರದೇಶಗಳಲ್ಲಿ ಕೆರೆ ನದಿ, ಕಾಲುವೆಗಳ ಮೇಲೆ ಅಪ್ಪಳಿಸಿದ ಕಾರಣ ಅವೂ ಉಕ್ಕೇರಿ ಹರಿದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.ಸುದ್ದಿ ತಿಳಿದ ಬೆನ್ನಲ್ಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಈ ವೇಳೆ ಕಟ್ಟಡ, ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ಹಲವು ಶವಗಳು ಪತ್ತೆಯಾಗಿದೆ. ಈ ಪೈಕಿ ಹಲವು ಮಹಿಳೆಯರು ಮತ್ತು ಮಕ್ಕಳ ಶವಗಳು ಕೂಡಾ ಸಿಕ್ಕಿವೆ. 4 ಗ್ರಾಮಗಳಿಂದ ಈವರೆಗೂ 250ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಈ ಪೈಕಿ ಕೆಲವು ಗಾಯಾಗಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಯನಾಡಿನಲ್ಲಿ 3,069 ಜನರನ್ನು ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದ್ದು, 45 ಕ್ಯಾಂಪ್‌ ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾಹಿತಿ ನೀಡಿದ್ದಾರೆ.

ಆಕ್ರಂದನ:ದುರಂತಕ್ಕೆ ಒಳಗಾದ ಗ್ರಾಮಗಳ ಜನರು ಸಂಬಂಧಿಕರಿಗೆ ಕರೆ ಮಾಡಿ ತಮ್ಮನ್ನು ರಕ್ಷಣೆ ಮಾಡುವಂತೆ ಗೋಳಿಡುತ್ತಿರುವ, ತಮ್ಮವರನ್ನು ಕಳೆದುಕೊಂಡು ಚೀರಾಡುತ್ತಿರುವ ಆಡಿಯೋ ಕರೆಗಳು ಘಟನೆಯ ಭೀಕರತೆಗೆ ಸಾಕ್ಷಿಯಾಗಿ ಹೊರಹೊಮ್ಮಿವೆ.

ಹರಿವಿನ ಹಾದಿಯೇ ಬದಲು:ಭೂಕುಸಿತದ ವೇಳೆ ಕೊಚ್ಚಿಹೋದ ವಾಹನಗಳು ಮಣ್ಣಿನಡಿ, ಮರಗಳ ಅಡಿ ಬಿದ್ದಿರುವ ದೃಶ್ಯಗಳು ಘಟನೆಯ ತೀವ್ರತೆಯನ್ನು ಸಾರಿಹೇಳಿವೆ. ಭೂಕುಸಿದ ಪರಿಣಾಮ ಹಲವು ಜಲಮೂಲಗಳು ಉಕ್ಕಿ ಹರಿಯುತ್ತಿದ್ದು, ತಮ್ಮ ಹರಿವಿನ ಹಾದಿಯನ್ನೇ ಬದಲಿಸಿ, ಜನವಸತಿ ಪ್ರದೇಶಗಳಿ ನುಗ್ಗಿ ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಿವೆ. ಘಟನಾ ಸ್ಥಳಗಳಲ್ಲಿ ಈಗಲೂ ಅಲ್ಲಲ್ಲಿ ಭೂಕುಸಿತದ ಘಟನೆಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

57 ಸೆಂ.ಮೀ. 48 ತಾಸಿನಲ್ಲಿ ವಯನಾಡ್‌ನಲ್ಲಿ ಆದ ಮಳೆ

250 ಜನರು ದುರಂತ ಸ್ಥಳದಲ್ಲಿ ಬದುಕಿಳಿದವರ ರಕ್ಷಣೆ

128 ಮಂದಿ ಭೂಕುಸಿತದಲ್ಲಿ ಗಾಯಗೊಂಡವರು

--ಏನಾಯ್ತು?:

ಕೆಲ ದಿನಗಳಿಂದ ವಯನಾಡು ಜಿಲ್ಲೆಯಲ್ಲಿ ಧಾರಾಕಾರ ಮಳೆ. ಜಿಲ್ಲೆಯ ಮುಂಡಕ್ಕಾಯ್‌ನಿಂದ ಕೆಲವೇ ಕಿ.ಮೀ. ಅಂತರದಲ್ಲಿರುವ ಎತ್ತರದ ಪ್ರದೇಶದಿಂದ ಮಳೆಯೊಂದಿಗೆ ಜಾರಿದ ಗುಡ್ಡ. ಮುಂಡಕ್ಕಾಯ್‌ ಆಪೋಶನ. ಬಳಿಕ ಚೂರಲ್‌ಮಾಲಾಗೆ ನುಗ್ಗಿದ ಮಣ್ಣು, ನೀರು. 200ಕ್ಕೂ ಹೆಚ್ಚು ಮನೆಗಳು ಭೂಸಮಾಧಿ. ನಂತರ ಅಟ್ಟಮಲ, ನೂಲ್‌ಪುಳದಲ್ಲೂ ಅನಾಹುತ.

ಯಾವಾಗ?

ಮಂಗಳವಾರ ನಸುಕಿನ ಜಾವ 1ರಿಂದ ಬೆಳಗ್ಗೆ 6ರವರೆಗೆ.

ಕೇರಳದಲ್ಲಿ 2 ದಿನ ಶೋಕಾಚರಣೆ

ಭೀಕರ ದುರಂತ ಹಿನ್ನೆಲೆಯಲ್ಲಿ ಮಂಗಳವಾರ, ಬುಧವಾರ ಕೇರಳದಲ್ಲಿ ಶೋಕಾಚರಣೆ ಘೋಷಣೆ. ರಾಜ್ಯಾದ್ಯಂತ ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಹಾರಾಟ.