ಸಾರಾಂಶ
ಅಯೋಧ್ಯೆ: ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಮುಖ ಸದಸ್ಯ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ (75) ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದರು.ಕಾಲಿನ ಗಾಯದಿಂದ ಬಳಲುತ್ತಿದ್ದ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಹಲವಾರು ತಿಂಗಳುಗಳಿಂದ ಆರೋಗ್ಯ ಸಂಪೂರ್ಣ ಹದೆಗೆಟ್ಟಿತ್ತು.
ರಾಮಜನ್ಮಭೂಮಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮಿಶ್ರಾ ಅವರನ್ನು ರಾಮಮಂದಿರದ ರಿಸೀವರ್ ಆಗಿ ನೇಮಿಸಲಾಗಿತ್ತು. ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದ ಇವರು, 2009 ಲೋಕಸಭೆ ಚುನಾವಣೆಗೆ ಫೈಜಾಬಾದ್ (ಅಯೋಧ್ಯೆ) ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ಮಿಶ್ರಾ ನಿಧನಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಆರೋಗ್ಯ, ಸಂಬಂಧಿತ ಕೋರ್ಸ್‌ಗಳಿಗೆ ದೂರ ಶಿಕ್ಷಣ ರದ್ದು
ಪಿಟಿಐ ನವದೆಹಲಿ2025ರ ಶೈಕ್ಷಣಿಕ ಅವಧಿಯಿಂದ ಜಾರಿಗೆ ಬರುವಂತೆ, ಆರೋಗ್ಯ ರಕ್ಷಣೆ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಕೋರ್ಸ್‌ಗಳಿಗೆ ಮುಕ್ತ, ದೂರಶಿಕ್ಷಣ ಅಥವಾ ಆನ್‌ಲೈನ್ ಮೂಲಕ ಅವಕಾಶ ನೀಡುವುದನ್ನು ನಿಲ್ಲಿಸುವಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಿದೆ.
ಮುಕ್ತ, ದೂರಶಿಕ್ಷಣ ಅಥವಾ ಆನ್‌ಲೈನ್ ಮೂಲಕ ಇಂಥ ವೃತ್ತಿಪರ ಕೋರ್ಸ್‌ಗಳನ್ನು ನಡೆಸುವುದರಿಂದ ಶಿಕ್ಷಣದ ಗುಣಮಟ್ಟದ ಕುಸಿಯುತ್ತಿದೆ ಎಂಬ ದೂರುಗಳಿವೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.2021ರ ಎನ್‌ಸಿಎಎಚ್‌ಪಿ ಕಾಯ್ದೆ ಪ್ರಕಾರ ಹೊಸ ನಿಯಮ ಅನುಷ್ಠಾನಗೊಳ್ಳಲಿದೆ ಹಾಗೂ 2025ರ ಜುಲೈ-ಆಗಸ್ಟ್ ಶೈಕ್ಷಣಿಕ ಅವಧಿಯಿಂದಲೇ ಇದು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮನಃಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಆಹಾರ ಮತ್ತು ಪೌಷ್ಟಿಕಾಂಶ ವಿಜ್ಞಾನ, ಜೈವಿಕ ತಂತ್ರಜ್ಞಾನ, ಕ್ಲಿನಿಕಲ್ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ ಮೊದಲಾದ ಕೋರ್ಸ್‌ಗಳಿಗೆ ಅನ್ವಯವಾಗಲಿದೆ.
ರಜನಿ ‘ಕೂಲಿ’ 10 ದಿನದಲ್ಲಿ ಭರ್ಜರಿ ₹448 ಕೋಟಿ ಗಳಿಕೆ
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್, ಕನ್ನಡದ ಉಪೇಂದ್ರ, ರಚಿತಾರಾಮ್ ನಟಿಸಿರುವ ಬಹುತಾರಾಗಣದ ಕೂಲಿ ಚಿತ್ರ, ಬಿಡುಗಡೆ ಆದ 10 ದಿನದಲ್ಲಿ ಜಗತ್ತಿನಾದ್ಯಂತ ಬರೋಬ್ಬರಿ 447.5 ಕೋಟಿ ರು. ಕಲೆಕ್ಷನ್ ಮಾಡಿದೆ. ಈ ಪೈಕಿ ಭಾರತದಲ್ಲೇ 244 ಕೋಟಿ ರು. ಗಳಿಸಿದೆ.ಆ.14ರಂದು ತೆರೆ ಕಂಡಿದ್ದ ಸಿನಿಮಾ ಉತ್ತಮ ಆರಂಭ ಕಂಡಿದ್ದರೂ ಮೊದಲ ವಾರಾಂತ್ಯದಲ್ಲಿ ಗಳಿಕೆ ಇಳಿಕೆಯಾಗಿತ್ತು. ಆದರೆ ಎರಡನೇ ವಾರ ಪ್ರೇಕ್ಷರಿಂದ ಭರ್ಜರಿ ರೆಸ್ಟಾನ್ಸ್ ಸಿಕ್ಕಿದೆ ಹಾಗೂ ಶನಿವಾರ ಒಂದೇ ದಿನ 9.44 ಕೋಟಿ. ಕಲೆಕ್ಷನ್ ಮಾಡಿದೆ.ಇದಕ್ಕೂ ಮುನ್ನ ಶುಕ್ರವಾರ 5.18 ಕೋಟಿ ರು., ಗುರುವಾರ 6.15 ಕೋಟಿ ರು. ಗಳಿಸಿದೆ. ಬಿಡುಗಡೆಯಾದ ಮೊದಲ ದಿನವೇ 65 ಕೋಟಿ ರು.ಗಳಿಸಿದ್ದ ಸಿನಿಮಾ, ಮೊದಲ ವಾರ 229.65 ಕೋಟಿ ರು. ಗಳಿಸಿತ್ತು.
ಟ್ರಂಪ್ ಹೇಳಿಕೆ ಗಂಭೀರವಾಗಿ ಪರಿಗಣಿಸಿ: ಭಾರತಕ್ಕೆ ನಿಕ್ಕಿ
ಪಿಟಿಐ ನ್ಯೂಯಾರ್ಕ್‌ರಷ್ಯಾದಿಂದ ಭಾರತ ತೈಲ ಖರೀದಿಸುವ ವಿಚಾರವಾಗಿ ಭಾರತ ಮತ್ತು ಅಮೆರಿಕದ ನಡುವೆ ಜಟಾಪಟಿ ಮುಂದುವರಿದಿರುವ ನಡುವೆಯೇ, ‘ರಷ್ಯಾ ತೈಲದ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಭಿಪ್ರಾಯವನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲು ಶ್ವೇತಭವನದೊಂದಿಗೆ ಕೆಲಸ ಮಾಡಬೇಕು’ ಎಂದು ರಿಪಬ್ಲಿಕನ್ ಪಕ್ಷದ ನಾಯಕಿ ಹಾಗೂ ವಿಶ್ವಸಂಸ್ಥೆಯ ಮಾಜಿ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ವ್ಯಾಪಾರ ಭಿನ್ನಾಭಿಪ್ರಾಯಗಳು ಮತ್ತು ರಷ್ಯಾದ ತೈಲ ಆಮದುಗಳಂತಹ ಸಮಸ್ಯೆಗಳನ್ನು ಪರಿಹರಿಸಲು ಕಠಿಣ ಸಂವಾದದ ಅಗತ್ಯವಿದೆ. ರಷ್ಯಾ ತೈಲದ ಬಗ್ಗೆ ಟ್ರಂಪ್ ಅವರ ಅಭಿಪ್ರಾಯವನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು. ಶ್ವೇತಭವನದ ಜೊತೆಗೂಡಿ ಪರಿಹಾರ ಕಂಡುಕೊಳ್ಳಬೇಕು. ಇದು ಬೇಗ ಆದಷ್ಟು ಉತ್ತಮ’ ಎಂದಿದ್ದಾರೆ.
ಬದಲಾದ ನಿಕ್ಕಿ ನಿಲುವು:ಆದರೆ ಇತ್ತೀಚೆಗಷ್ಟೇ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ್ದನ್ನು ವಿರೋಧಿಸಿದ್ದ ಹ್ಯಾಲೆ, ‘ಅಮೆರಿಕವು ಭಾರತವನ್ನು ಶತ್ರುವಾಗಿ ಅಲ್ಲ, ಪ್ರಮುಖ ಪ್ರಜಾಸತ್ತಾತ್ಮಕ ಪಾಲುಗಾರನಾಗಿ ಪರಿಗಣಿಸಬೇಕು. ನಮ್ಮ 25 ವರ್ಷಗಳ ಹಳೆಯ ಸಂಬಂಧವನ್ನು ದುರ್ಬಲಗೊಳಿಸುವುದು ದೊಡ್ಡ ತಪ್ಪು’ ಎಂದು ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾದ ಬೆನ್ನಲ್ಲೇ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.