ಸಾರಾಂಶ
ನವದೆಹಲಿ: ದೆಹಲಿಯ ಸಿಆರ್‌ಪಿಎಫ್ ಶಾಲೆಯ ಬಳಿ ಭಾನುವಾರ ನಡೆದ ಸ್ಫೋಟದಲ್ಲಿ ಖಲಿಸ್ತಾನಿ ಉಗ್ರರು ಅಥವಾ ಜೈಲುಪಾಲಾಗಿರುವ ಲಾರೆನ್ಸ್ ಬಿಷ್ಣೋಯಿ ತಂಡದ ಕೈವಾಡವಿರುವ ಬಗ್ಗೆ ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ ಈ ಸ್ಫೋಟದ ಹೊಣೆಯನ್ನು ಪಾಕಿಸ್ತಾನ ಮೂಲದ ಲಶ್ಕರ್-ಇ-ತೈಬಾ ಸಂಘಟನೆಯ ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಹೀಗಾಗಿ ಹಲವು ಆಯಾಮಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸ್ಫೋಟದ ದೃಶ್ಯಗಳನ್ನು ಖಲಿಸ್ತಾನ್ ಜಿಂದಾಬಾದ್ ಎಂಬ ಬರಹದೊಂದಿಗೆ ‘ಜಸ್ಟಿಸ್ ಲೀಗ್ ಇಂಡಿಯಾ’ ಎಂಬ ಖಾತೆಯಿಂದ ಟೆಲಿಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಖಲಿಸ್ತಾನಿ ಬೆಂಬಲಿಗರ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಯಾಗಿ ಸ್ಫೋಟ ನಡೆಸಿರುವುದಾಗಿ ಬರೆಯಲಾಗಿತ್ತು. ಈ ಖಾತೆಯ ಸೃಷ್ಟಿರ್ಕತರ ಕುರಿತ ಮಾಹಿತಿ ಕೋರಿ ಪೊಲೀಸರು ಟೆಲಿಗ್ರಾಂಗೆ ಪತ್ರ ಬರೆದಿದ್ದಾರೆ.
ಅಂತೆಯೇ, ಪೊಲೀಸರು ಘಟನಾಸ್ಥಳದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದು, ಸ್ಫೋಟದ ಹಿಂದಿನ ರಾತ್ರಿ ಬಿಳಿ ಟಿ-ಶರ್ಟ್ ತೊಟ್ಟ ಶಂಕಿತನನ್ನು ಗುರುತಿಸಿದ್ದಾರೆ.
==
ನ.1-19ರ ಅವಧಿಯಲ್ಲಿ ಏರಿಂಡಿಯಾ ಮೇಲೆ ದಾಳಿ: ಉಗ್ರ ಪನ್ನೂನ್
ನವದೆಹಲಿ: ಮುಂದಿನ ನ.1ರಿಂದ ನ.19ರ ಅವಧಿಯಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಬೇಡಿ. ಆ ಅವಧಿಯಲ್ಲಿ ವಿಮಾನದ ಮೇಲೆ ದಾಳಿ ನಡೆಯಬಹುದು ಎಂದು ಖಲಿಸ್ತಾನಿ ಉಗ್ರ ಗುರು ಪತ್ವಂತ್ ಸಿಂಗ್ ಪನ್ನೂ ಸಿಖ್ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾನೆ. ದೆಹಲಿಯಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ 40 ವರ್ಷ ತುಂಬುತ್ತಿರುವ ಬೆನ್ನಲ್ಲೇ ಆತ ಈ ಎಚ್ಚರಿಕೆ ನೀಡಿದ್ದಾನೆ. ಭಾರತದ ಮೋಸ್ಟ್ ವಾಂಡೆಟ್ ಉಗ್ರರ ಪೈಕಿ ಒಬ್ಬನಾಗಿರುವ ಪನ್ನೂ ಸದ್ಯ ಅಮೆರಿಕದಲ್ಲಿ ವಾಸಿಸುತ್ತಿದ್ದಾನೆ.