ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ‘ಧುರಂಧರ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ಬಾಲಿವುಡ್ ನಟ ಅಕ್ಷಯ್ ಖನ್ನಾ ಇದೀಗ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಮುಂಬೈ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ‘ಧುರಂಧರ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ಬಾಲಿವುಡ್ ನಟ ಅಕ್ಷಯ್ ಖನ್ನಾ ಇದೀಗ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಸದ್ಯ ‘ಮಹಾಕಾಳಿ’ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿರುವ ಪೂಜಾ ಕೊಲ್ಲೂರು, ಖನ್ನಾ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದು, ಅವರ ನಟನೆಯನ್ನು ಅಧಿಕೃತಪಡಿಸಿದ್ದಾರೆ. ಪ್ರಶಾಂತ್ ವರ್ಮಾ ಸಿನೆಮ್ಯಾಟಿಕ್ ಯೂನಿವರ್ಸ್‌ನ ಭಾಗವಾಗಿ ಹೊರಬರುತ್ತಿರುವ ‘ಮಹಾಕಾಳಿ’ಯಲ್ಲಿ ಕನ್ನಡದ ನಟಿ ಭೂಮಿ ಶೆಟ್ಟಿ ಮಹಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖನ್ನಾ ಶುಕ್ರಾಚಾರ್ಯರ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇದು ಖನ್ನಾ ಅಭಿನಯದ ಮೊದಲ ತೆಲುಗು ಚಿತ್ರವಾಗಲಿದೆ.
==ಧುರಂಧರ್‌ನಲ್ಲಿ ‘ಬಲೂಚ್’ ಪದ ಮ್ಯೂಟ್‌ಗೆ ಆದೇಶ: ನಿನ್ನೆ ಮರು ಬಿಡುಗಡೆ
ನವದೆಹಲಿ: ವಿಶ್ವಾದ್ಯಂತ 1100 ಕೋಟಿ ರು.ಗೂ ಹೆಚ್ಚು ಸಂಪಾದನೆ ಮಾಡಿರುವ ರಣವೀರ್ ಸಿಂಗ್, ಅಕ್ಷಯ್ ಖನ್ನಾ ನಟನೆಯ ಧುರಂಧರ್ ಸಿನಿಮಾದಲ್ಲಿನ ಕೆಲ ಪದಗಳನ್ನು ಮ್ಯೂಟ್ ಮಾಡುವಂತೆ ಮತ್ತು ಕೆಲವೊಂದರಲ್ಲಿ ಮಾರ್ಪಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಚಿತ್ರದಲ್ಲಿ ಪಾಕ್‌ನಲ್ಲಿ ನಡೆಯುವ ಕೆಲ ದೃಶ್ಯಗಳಿದ್ದು, ಅದರಲ್ಲಿ ಬಲೂಚಿ ಜನಾಂಗ ಅವಹೇಳನದ ರೀತಿಯ ಸಂಭಾಷಣೆ ಇದೆ ಎಂದು ಆರೋಪಿಸಿ ಗುಜರಾತ್ ಹೈಕೋರ್ಟ್‌ನಲ್ಲಿ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಲೂಚ್ ಪದ ಮ್ಯೂಟ್‌ಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬದಲಾವಣೆ ಮಾಡಿದ ಚಿತ್ರ ಅವತರಣಿಕೆಯನ್ನು ಜ.1ರಂದು ಮರು ಬಿಡುಗಡೆ ಮಾಡಲಾಗಿದೆ.
==ರಾಹುಲ್ ಗಾಂಧಿ ಶ್ರೀರಾಮ ಎಂದು ಮಹಾ ಕಾಂಗ್ರೆಸ್ಸಿಗ ಬಣ್ಣನೆ: ಬಿಜೆಪಿ ನಾಯಕರ ಟೀಕೆ
ನವದೆಹಲಿ: ‘ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶ್ರೀರಾಮನಂತೆ. ಅವರು ರಾಮನ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ನಾನಾ ಪಟೋಲೆಲ್ ಹೇಳಿದ್ದಾರೆ. ಇದನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ರಾಹುಲ್ ಗಾಂಧಿ ಅಯೋಧ್ಯೆಗೆ ಇನ್ನು ಹೋಗಿಲ್ಲವೇಕೆ ಎಂಬ ಬಿಜೆಪಿಗರ ಪ್ರಶ್ನೆಗಳಿಗೆ ಪ್ರತಿಕ್ರಿಯಿದ ಪಟೋಲೆ, ‘ರಾಹುಲ್ ಗಾಂಧಿಯವರು ಶ್ರೀ ರಾಮನ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಸಮಯದಲ್ಲಿ ತುಳಿತಕ್ಕೊಳಗಾದ ಮತ್ತು ಬಳಲುತ್ತಿರುವ ಜನರಿಗೆ ನ್ಯಾಯ ನೀಡುವಲ್ಲಿ ಭಗವಾನ್ ಶ್ರೀ ರಾಮನು ವಹಿಸಿದ ಪಾತ್ರ, ರಾಹುಲ್ ಗಾಂಧಿಯವರು ಅದೇ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.
==ಕಾಶ್ಮೀರದಲ್ಲಿ ಸ್ಫೋಟಕ, ಡ್ರಗ್ಸ್ ಎಸೆದು ಪಾಕ್ ಡ್ರೋನ್ ಪರಾರಿ: ಶೋಧ
ಜಮ್ಮು: ಹೊಸ ವರ್ಷಾಚರಣೆ ಹಿನ್ನೆಲೆ ಭದ್ರತಾ ಪಡೆಗಳು ತೀವ್ರ ಬಿಗಿ ಬಂದೋಬಸ್ತ್ ಕೈಗೊಂಡ ನಡುವೆಯೇ, ಪಾಕಿಸ್ತಾನದ ಡ್ರೋನ್ ಒಂದು ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ, ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಶಂಕಾಸ್ಪದ ಸ್ಫೋಟಕ ಸಾಮಗ್ರಿಗಳನ್ನು ಎಸೆದುಹೋದ ಕಳವಳಕಾರಿ ಘಟನೆ ನಡೆದಿದೆ. ಈ ಬೆನ್ನಲ್ಲೇ ಭದ್ರತಾ ಪಡೆಗಳು ಬಿರುಸಿನ ಶೋಧ ಕಾರ್ಯಾಚರಣೆ ಆರಂಭಿಸಿವೆ. ಡ್ರೋನ್, ಪೂಂಛ್‌ನ ಖಾಡಿ ಕರ್ಮಾಡ ವಾಯುಪ್ರದೇಶವನ್ನು ಪ್ರವೇಶಿ, 5 ನಿಮಿಷಕ್ಕೂ ಹೆಚ್ಚು ಕಾಲ ಭಾರತದ ಪ್ರದೇಶದಲ್ಲೇ ಹಾರಾಟ ನಡೆಸಿದೆ. ಈ ವೇಳೆ ಸುಧಾರಿತ ಸ್ಫೋಟ ಸಾಧನ, ಮದ್ದುಗುಂಡು, ಮಾದಕ ವಸ್ತುಗಳನ್ನು ಎಸೆದುಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದರ ಜೊತೆಗೆ, ದೋಡಾ-ಕಿಶ್ತ್ವಾರ್ ಅರಣ್ಯ ಪ್ರದೇಶದಲ್ಲಿ ಜೈಶ್ ಉಗ್ರಸಂಘಟನೆಯ 2 ಗುಂಪುಗಳು ಕಾರ್ಯಾಚರಿಸುತ್ತಿರುವ ಶಂಕೆಯೂ ವ್ಯಕ್ತವಾಗಿದೆ.