ಫೆ.1ರಿಂದ ಜಾರಿಗೆ ಬರುವಂತೆ ಬೀಡಿ, ಸಿಗರೆಟ್‌, ಗುಟ್ಕಾ, ಪಾನ್‌ ಮಸಾಲಾ, ಸುವಾಸಿತ ತಂಬಾಕು ಮೇಲೆ ಭಾರೀ ಪ್ರಮಾಣದ ಅಬಕಾರಿ ಸುಂಕ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಹಾಲಿ, ಈ ಉತ್ಪನ್ನಗಳ ಮೇಲೆ ಇರುವ ಶೇ.40 ಮತ್ತು ಶೇ.18ರಷ್ಟು ಜಿಎಸ್‌ಟಿಗೆ ಹೊರತಾದ ಏರಿಕೆಯಾಗಿರಲಿದೆ.

ನವದೆಹಲಿ: ಫೆ.1ರಿಂದ ಜಾರಿಗೆ ಬರುವಂತೆ ಬೀಡಿ, ಸಿಗರೆಟ್‌, ಗುಟ್ಕಾ, ಪಾನ್‌ ಮಸಾಲಾ, ಸುವಾಸಿತ ತಂಬಾಕು ಮೇಲೆ ಭಾರೀ ಪ್ರಮಾಣದ ಅಬಕಾರಿ ಸುಂಕ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಹಾಲಿ, ಈ ಉತ್ಪನ್ನಗಳ ಮೇಲೆ ಇರುವ ಶೇ.40 ಮತ್ತು ಶೇ.18ರಷ್ಟು ಜಿಎಸ್‌ಟಿಗೆ ಹೊರತಾದ ಏರಿಕೆಯಾಗಿರಲಿದೆ.

ಕಳೆದ ವರ್ಷ ಜಿಎಸ್ಟಿ ಸುಧಾರಣೆ ಭಾಗವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಹೆಚ್ಚುವರಿ ತೆರಿಗೆ ಅನ್ವಯ ಈ ಘೋಷಣೆ ಮಾಡಲಾಗಿದ್ದು, ಇದು 10 ಕೋಟಿ ತಂಬಾಕು ಬಳಕೆದಾರರ ಜೇಬು ಸುಡುವುದು ಖಚಿತವಾಗಿದೆ. ಸರ್ಕಾರದ ಈ ಘೋಷಣೆ ಬೆನ್ನಲ್ಲೇ ಐಟಿಸಿ ಸೇರಿದಂತೆ ಸಿಗರೆಟ್‌ ಉತ್ಪಾದನಾ ಕಂಪನಿಗಳ ಷೇರು ಬೆಲೆ ಶೇ.10ರಿಂದ ಶೇ.17ರವರೆಗೂ ಕುಸಿತ ಕಂಡಿದೆ.

ತಂಬಾಕು ಸೇವನೆಯಿಂದಾಗಿ ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳಿಗೆ ಸಮನಾಗಿ ತೆರಿಗೆ ಹೇರಿಕೆ ಮಾಡುವ ಸಲುವಾಗಿ ಹೆಚ್ಚಿನ ತೆರಿಗೆ ಹಾಕಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಸಿಗರೆಟ್‌ ದರ:

ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ಅನ್ವಯ, ಸಿಗರೆಟ್‌ನ ಉದ್ದದ ಆಧಾರದ ಮೇಲೆ ಅಬಕಾರಿ ಸುಂಕ ನಿಗದಿಯಾಗಲಿದೆ. ಅಂದರೆ ಪ್ರತಿ ಸಿಗರೆಟ್‌ ಬೆಲೆ ಕನಿಷ್ಠ 2.50 ರು.ನಿಂದ ಗರಿಷ್ಠ 8.50 ರು.ವರೆಗೆ ಹೆಚ್ಚಳವಾಗಲಿದೆ.

ಯಾವುದಕ್ಕೆ ಎಷ್ಟು ದರ?:

65 ಎಂಎಂ ಉದ್ದದ, ಫಿಲ್ಟರ್‌ ರಹಿತ ಸಿಗರೆಟ್‌ ಬೆಲೆ 2.05 ರು., ಫಿಲ್ಟರ್‌ ಸಹಿತ ಸಿಗರೆಟ್‌ ಬೆಲೆ 2.10 ರು., 65-70 ಮಿ.ಮೀ ಬೆಲೆ 3.60 ರು.ನಿಂದ 4 ರು., 70-75 ಮಿ.ಮೀ ಸಿಗರೆಟ್‌ ಬೆಲೆ 5.4 ರು.ನಷ್ಟು ಹೆಚ್ಚಳವಾಗಲಿದೆ. ಕೆಲವು ಮಾದರಿಯ ಪ್ರೀಮಿಯಂ ಸಿಗರೆಟ್‌ ಬೆಲೆ 8.50 ರು.ವರೆಗೆ ಏರಿಕೆ ಆಗಲಿದ್ದರೂ, ಅವುಗಳ ಬಳಕೆ ತೀರಾ ಕಡಿಮೆ.

ಬೀಡಿಗೆ ಹೊರೆ ಕಡಿಮೆ:

ಸಿಗರೆಟ್‌, ಜರ್ದಾ ಮೇಲೆ ಶೇ.40ರಷ್ಟು ಜಿಎಸ್ಟಿ ವಿಧಿಸಿದ್ದರೂ, ಬೀಡಿಗಳ ಮೇಲೆ ಶೇ.18ರಷ್ಟು ಜಿಎಸ್ಟಿ ಇರಲಿದ್ದು, ಅದರ ಜೊತೆಗೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುವುದು.

ಗುಟ್ಕಾ, ಪಾನ್‌:

ಹೊಸ ಬದಲಾವಣೆ ಅನ್ವಯ ಗುಟ್ಕಾದ ಮೇಲೆ ಶೇ.40ರಷ್ಟು ಜಿಎಸ್ಟಿ ಜೊತೆಗೆ ಶೇ.91ರಷ್ಟು ಅಬಕಾರಿ ಸುಂಕ, ಜಗಿಯುವ ತಂಬಾಕಿನ ಮೇಲೆ ಶೇ.82ರಷ್ಟು, ಜರ್ದಾ ಸುವಾಸಿತ ತಂಬಾಕಿನ ಮೇಲೆ ಶೇ.82ರಷ್ಟು ಅಬಕಾರಿ ಸುಂಕ ವಿಧಿಸಲಾಗುವುದು. ಇದಲ್ಲದೆ ಜರ್ದಾ ಕಂಪನಿಯ ಉತ್ಪಾದನೆ ಸಾಮರ್ಥ್ಯ ಆಧರಿಸಿ ಅವುಗಳ ಮೇಲೆ ಹೆಚ್ಚುವರಿಯಾಗಿ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ ಕೂಡಾ ಹಾಕಲಾಗುವುದು. ಈ ಎಲ್ಲಾ ಏರಿಕೆ ಬಳಿಕ ಗುಟ್ಕಾ, ಪಾನ್‌ ಮಸಾಲಾದ ಒಟ್ಟಾರೆ ತೆರಿಗೆ ಶೇ.88ರಷ್ಟು ಇರಲಿದೆ.

ಆದಾಯ ಹಂಚಿಕೆ:

ತಂಬಾಕು ಉತ್ಪನ್ನಗಳ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯಿಂದ ಸಂಗ್ರಹವಾಗುವ ಆದಾಯವನ್ನು ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಗಳ ಜತೆಗೆ ಹಂಚಲಾಗುತ್ತದೆ. ಇನ್ನು ಪಾನ್‌ ಮಸಾಲಗಳ ಮೇಲಿನ ಆರೋಗ್ಯ ತೆರಿಗೆಯನ್ನು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಅಥವಾ ಇತರೆ ಆರೋಗ್ಯ ಸಂಬಂಧಿ ಯೋಜನೆಗಳು ಅಥವಾ ಚಟುವಟಿಕೆಗಳಿಗಾಗಿ ರಾಜ್ಯಗಳ ಜತೆಗೆ ಹಂಚಿಕೆ ಮಾಡಲಾಗುತ್ತದೆ.