ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾರ್‍ಯಕ್ರಮದಡಿ ಕೋಟ್ಪಾ-2003 ಕಾಯ್ದೆ ಕುರಿತ ತೃತೀಯ ತ್ರೈಮಾಸಿಕ ಸಭೆ ನೆರವೇರಿತು.
ಉಡುಪಿ ಡಿಸಿ ಕಚೇರಿಯಲ್ಲಿ ಕೋಟ್ಪಾ-2003 ಕಾಯ್ದೆ ಕುರಿತ ತೃತೀಯ ತ್ರೈಮಾಸಿಕ ಸಭೆ
ಉಡುಪಿ: ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆ ವ್ಯಾಪ್ತಿಯ 1069 ಶಾಲೆಗಳಲ್ಲಿ 893 ಶಾಲೆಗಳನ್ನು ‘ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ’ ಎಂದು ದೃಢೀಕರಿಸಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾರ್‍ಯಕ್ರಮದಡಿ ಕೋಟ್ಪಾ-2003 ಕಾಯ್ದೆ ಕುರಿತ ತೃತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲ 1069 ಶಾಲೆಗಳ ಪರಿಸರವನ್ನು ತಂಬಾಕು ಮುಕ್ತಗೊಳಿಸಿ ಶೇ. 100 ಸಾಧನೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ತಂಬಾಕು ನಿಯಂತ್ರಣ ತನಿಖಾ ದಳವು ಅನಿರೀಕ್ಷಿತ ದಾಳಿ ನಡೆಸಿ, ತಂಬಾಕು ಉತ್ಪನ್ನ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಪಡೆಯದಿರುವ ಅಂಗಡಿ ಮುಂಗಟ್ಟುಗಳ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ 2025ರ ಏಪ್ರಿಲ್ಮಾ ತಿಂಗಳಿನಿಂದ ಈವರೆಗೆ 44ಕ್ಕೂ ಹೆಚ್ಚು ದಿಢೀರ್ ದಾಳಿಗಳನ್ನು ನಡೆಸಿ, ಸೆಕ್ಷನ್ 4, ಸೆಕ್ಷನ್ 6 (ಎ), 6 (ಬಿ) ಅಡಿ ಒಟ್ಟು 578 ಪ್ರಕರಣವನ್ನು ದಾಖಲಿಸಿಕೊಂಡು 98,550 ರು. ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲೂ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿಸಿದ ತಂಬಾಕು ಉತ್ಪನ್ನಗಳನ್ನು ಬಳಸಿದವರ ಮೇಲೆ 110 ಪ್ರಕರಣಗಳಿಂದ 12,450 ರು.. ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮರಾವ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.