ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಅಣ್ಣಾ ಡಿಎಂಕೆ ಮೈತ್ರಿಯನ್ನು ಟೀಕಿಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಉಗ್ರವಾದಿ’ ಎಂದು ಕರೆದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದ ಸೃಷ್ಟಿಸಿದ್ದಾರೆ.

ಚೆನ್ನೈ : ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಅಣ್ಣಾ ಡಿಎಂಕೆ ಮೈತ್ರಿಯನ್ನು ಟೀಕಿಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಉಗ್ರವಾದಿ’ ಎಂದು ಕರೆದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿ ಕ್ಷಮೆಗೆ ಆಗ್ರಹಿಸಿದೆ. ಬಳಿಕ ಸ್ಪಷ್ಟನೆ ನೀಡಿರುವ ಖರ್ಗೆ, ‘ನಾನು ಆ ಅರ್ಥದಲ್ಲಿ ಹೇಳಿರಲಿಲ್ಲ. ಮೋದಿ ಅವರು ರಾಜಕಾರಣದಲ್ಲಿ ಭಯ ಮೂಡಿಸ್ತಿದ್ದಾರೆ ಎಂದಿದ್ದೆ’ ಎಂದು ಹೇಳಿದ್ದಾರೆ.

ಮಂಗಳವಾರ ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ‘ಮೋದಿ ಜತೆ ಅವರು (ಎಐಎಡಿಎಂಕೆ) ಕೈಜೋಡಿಸಲು ಹೇಗೆ ಸಾಧ್ಯ? ಅವರೊಬ್ಬ ಉಗ್ರವಾದಿ. ಅವರಿಗೆ ಸಮಾನತೆಯಲ್ಲಿ ನಂಬಿಕೆ ಇಲ್ಲ. ಅವರ ಪಕ್ಷಕ್ಕೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಇಂಥವರ ಜತೆ ಅವರು (ಅಣ್ಣಾಡಿಎಂಕೆ) ಕೈಜೋಡಿಸುತ್ತಿದ್ದಾರೆ’ ಎಂದರು.

‘ಮೋದಿಯನ್ನು ನಾನು ಉಗ್ರ ಎನ್ನಲಿಲ್ಲ

‘ಮೋದಿ ಉಗ್ರವಾದಿ’ ಹೇಳಿಕೆಗೆ ಪತ್ರಕರ್ತರು ಪತ್ರಿಕಾಗೋಷ್ಠಿಯಲ್ಲೇ ಸ್ಪಷ್ಟನೆ ಕೇಳಿದಾಗ, ‘ಮೋದಿಯನ್ನು ನಾನು ಉಗ್ರ ಎನ್ನಲಿಲ್ಲ. ಬದಲಿಗೆ, ವಿರೋಧಿಗಳನ್ನು ಹತ್ತಿಕ್ಕುವ ಸಲುವಾಗಿ ಅವರು ತಮ್ಮ ಹುದ್ದೆ ಹಾಗೂ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಪಕ್ಷಗಳಲ್ಲಿ ಹಾಗೂ ಜನರಲ್ಲಿ ಭಯ ಮೂಡಿಸುತ್ತಿದ್ದರೆ ಎಂಬುದು ನನ್ನ ಮಾತಿನ ಅರ್ಥವಾಗಿತ್ತು’ ಎಂದು ಸ್ಪಷ್ಟೀಕರಿಸಿದರು.

ಬಿಜೆಪಿ ಕಿಡಿ:

ಕೇಂದ್ರ ಸಚಿವ ಹಾಗೂ ತಮಿಳುನಾಡು ಬಿಜೆಪಿ ಚುನಾವಣಾ ಪ್ರಭಾರಿ ಪೀಯೂಷ್‌ ಗೋಯಲ್‌ ಟ್ವೀಟ್‌ ಮಾಡಿ, ‘ಭಾರತದ ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ಕಾಂಗ್ರೆಸ್ ಮತ್ತು ಡಿಎಂಕೆ ತುಂಬಾ ಕೆಳಮಟ್ಟಕ್ಕೆ ಇಳಿದಿರುವುದು ನನಗೆ ನಾಚಿಕೆಗೇಡಿನ ಸಂಗತಿ. ಪ್ರಧಾನಿಗೆ ಮತ್ತು ಅವರಿಗೆ ಮತ ಹಾಕಿದ ಭಾರತದ ಜನರಿಗೆ ಈ ಅವಮಾನ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಮತ್ತು ಎಂ.ಕೆ. ಸ್ಟಾಲಿನ್ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.