ಸಾರಾಂಶ
ಇಡೀ ದೇಶವನ್ನೇ ಬೆಚ್ಚಿಬೀಳಿಸಿ ವೈದ್ಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನೆಬ್ಬಿಸಿದ್ದ ಇಲ್ಲಿನ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂಜಯ್ ರಾಯ್‌ನನ್ನು ದೋಷಿ ಎಂದು ಕೋಲ್ಕತಾ ದ ಜಿಲ್ಲಾ ನ್ಯಾಯಾಲಯ ಶನಿವಾರ ಘೋಷಿಸಿದೆ.
ಕೋಲ್ಕತಾ: ಇಡೀ ದೇಶವನ್ನೇ ಬೆಚ್ಚಿಬೀಳಿಸಿ ವೈದ್ಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನೆಬ್ಬಿಸಿದ್ದ ಇಲ್ಲಿನ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂಜಯ್ ರಾಯ್‌ನನ್ನು ದೋಷಿ ಎಂದು ಕೋಲ್ಕತಾ ದ ಜಿಲ್ಲಾ ನ್ಯಾಯಾಲಯ ಶನಿವಾರ ಘೋಷಿಸಿದೆ. ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಸೋಮವಾರ ಪ್ರಕಟಿಸಲಿದೆ.
ಇದರೊಂದಿಗೆ ಘಟನೆ ನಡೆದ 162 ದಿನಗಳ ಬಳಿಕ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಕ್ಕಿದಂತಾಗಿದೆ. ತೀರ್ಪನ್ನು ಮೃತ ವೈದ್ಯೆಯ ಕುಟುಂಬ ಸ್ವಾಗತಿಸಿದರೆ, ಆದರೆ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರಿಗೂ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ. ಅಲ್ಲಿಯವರೆಗೂ ಹೋರಾಟ ಮುಂದುವರೆಯಲಿದೆ ಎಂದು ಹೇಳಿದೆ.ದೋಷಿ:
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಶನಿವಾರ ತೀರ್ಪು ನೀಡಿದ ನ್ಯಾಯಾಲಯ, ‘ಸಂಜಯ್ ರಾಯ್ ಘಟನೆ ನಡೆದ ದಿನ ಬೆಳಗಿನ ಜಾವ 4 ಗಂಟೆ ವೇಳೆಗೆ ಆಸ್ಪತ್ರೆಯನ್ನು ಪ್ರವೇಶಿಸಿದ್ದ. ಬಳಿಕ ಆಸ್ಪತ್ರೆಯ ಸೆಮಿನಾರ್ ರೂಂನಲ್ಲಿ ನಿದ್ದೆಯಲ್ಲಿದ್ದ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯ ಕತ್ತುಹಿಸುಕಿ ಹತ್ಯೆ ಮಾಡಿದ್ದು ಸಾಕ್ಷಿಗಳ ಹೇಳಿಕೆ ಮತ್ತು ಸಾಕ್ಷ್ಯಗಳಿಂದ ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು.
ಗಲ್ಲು ಅಥವಾ ಜೀವಾವಧಿ:
ರಾಯ್‌ನನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಸೆಕ್ಷನ್ 64, ಕೊಲೆಗೆ ಸಂಬಂಧಿಸಿದ ಸೆಕ್ಷನ್ 66 ಹಾಗೂ 103(1) ಅಡಿಯಲ್ಲಿ ದೋಷಿ ಎಂದು ಪರಿಗಣಿಸಲಾಗಿದ್ದು, ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯಾಗುವ ಸಂಭವವಿದೆ.
ಏನಿದು ಪ್ರಕರಣ?ಕಳೆದ ವರ್ಷ ಆ.10ರಂದು ಕೋಲ್ಕತಾದ ಆರ್ ಜಿ ಕರ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯ ಶವ ಆಸ್ಪತ್ರೆಯಲ್ಲಿ ಪತ್ತೆಯಾಗಿತ್ತು. ಪರೀಕ್ಷೆ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಕಂಡುಬಂದಿತ್ತು. ಘಟನೆ ಮಾರನೇ ದಿನ ಆರೋಪಿ ಸಂಜಯ್‌ರಾಯ್‌ನನ್ನು ಬಂಧಿಸಲಾಗಿತ್ತು. ಈತನಿಗೆ ಕಾಲೇಜಿನ ಪ್ರಾಚಾರ್ಯ ಸಂದೀಪ್ ಘೋಷ್ ಹಾಗೂ ಪೊಲೀಸ್ ಆಯುಕ್ತ ಮೊಂಡಲ್ ಅವರ ಬೆಂಬಲವೂ ಇದೆ ಎಂದು ಆರೋಪಿಸಲಾಗಿತ್ತು. ಆದರೆ ಆರೋಪಪಟ್ಟಿಯಲ್ಲಿ ಆಂಶಗಳು ಇರಲಿಲ್ಲ. ಮೊದಲು ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಕೋಲ್ಕತಾ ಪೊಲೀಸ್ ಆ.10ರಂದು ರಾಯ್‌ನನ್ನು ಬಂಧಿಸಿತ್ತು. ನಂತರ ಕೋಲ್ಕತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು.
ನಾನು ತಪ್ಪು ಮಾಡಿದ್ದರೆ ರುದ್ರಾಕ್ಷಿ ಸರ ತುಂಡಾಗುತ್ತಿತ್ತು: ರಾಯ್
ಶನಿವಾರ ತೀರ್ಪು ಪ್ರಕಟಕ್ಕೂ ಮುನ್ನ ನ್ಯಾಯಾಲಯದಲ್ಲಿ ಮಾತನಾಡಿದ ರಾಯ್, ನಾನು ನಿರಪರಾಧಿ. ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನು ರುದ್ರಾಕ್ಷಿ ಸರ ಧರಿಸಿದ್ದೇನೆ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಅದು ತುಂಡಾಗಿ ಹೋಗಿರುತ್ತಿತ್ತು ಎಂದು ನ್ಯಾಯಾಧೀಶರ ಮುಂದೆ ಗೋಳಿಟ್ಟ.