ಸಾರಾಂಶ
ಕೋಲ್ಕತಾ: ದೇಶದ ಮೊತ್ತಮೊದಲ ನದಿಯೊಳಗಿನ ಮೆಟ್ರೋ ರೈಲು ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಲ್ಲಿ ಚಾಲನೆ ನೀಡಲಿದ್ದಾರೆ.
ಎಂಜಿನಿಯರಿಂಗ್ ಅದ್ಭುತ’ ಎಂದು ಬಣ್ಣಿಸಲಾಗಿರುವ ಈ ಯೋಜನೆಯನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಸಾಲ್ಟ್ ಲೇಕ್‌ನಿಂದ ಹೌರಾಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದೆ. ಹೂಗ್ಲಿ ನದಿಯ ಕೆಳಗೆ ಈ ಮಾರ್ಗ ನಿರ್ಮಾಣವಾಗಿದೆ.
ಯೋಜನೆಯ ವಿಶೇಷಗಳು: ಇದು ನದಿಯ ಅಡಿಯಲ್ಲಿ ಮೆಟ್ರೋ ರೈಲು ಸಂಚರಿಸುವ ಭಾರತದ ಮೊದಲ ಸಾರಿಗೆ ಯೋಜನೆಯಾಗಿದೆ.
ನೀರೊಳಗಿನ ಸುರಂಗವು ಕೋಲ್ಕತ್ತಾ ಮೆಟ್ರೋ ವಿಸ್ತರಣೆ ಯೋಜನೆಯ ಭಾಗವಾಗಿದೆ. ಇದು ಹೂಗ್ಲಿ ನದಿಯ ಕೆಳಗೆ ನಿರ್ಮಾಣ ಆಗಿದ್ದು, ಸಾಲ್ಟ್ ಲೇಕ್ ಅನ್ನು ಹೌರಾಗೆ ಸಂಪರ್ಕಿಸುತ್ತದೆ.
ಹೊಸದಾಗಿ ನಿರ್ಮಿಸಲಾದ ಸುರಂಗದ ಕೆಳಭಾಗವು ನದಿಯ ಮೇಲ್ಮೈಯಿಂದ 26 ಮೀ. ಒಳಗಿದೆ. ರೈಲುಗಳು ನದಿಯ ತಳದಿಂದ 16 ಮೀಟರ್ ಕೆಳಗೆ ಚಲಿಸುತ್ತವೆ. ನೀರೊಳಗಿನ ಸುರಂಗ ಮಾರ್ಗ 520 ಮೀ. ಇದ್ದು ಇಲ್ಲಿ 45 ಸೆಕೆಂಡು ಕಾಲ ರೈಲು ಸಂಚರಿಸುತ್ತದೆ.
ಈ ಮಾರ್ಗ ನಿರ್ಮಾಣದಿಂದ ಹೌರಾ ಹಾಘೂ ಸಿಯಾಲ್‌ದಹ ನಡುವಿನ ಪ್ರಯಾಣ ಅವಧಿ1.5 ತಾಸಿನಿಂದ 40 ನಿಮಿಷಕ್ಕೆ ತಗ್ಗಲಿದೆ. ರಸ್ತೆ ಮೂಲಕ ಇಲ್ಲಿ ಸಂಚರಿಸಲು 1.5 ತಾಸು ಬೇಕು. ಕೋಲ್ಕತ್ತಾದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಈ ಯೋಜನೆ ತುಂಬಾ ಸಹಕಾರಿಯಾಗಲಿದೆ.
ಭಾರತದ ಅಫ್ಕಾನ್ಸ್ ಮತ್ತು ರಷ್ಯಾದ ಕಂಪನಿ ಟ್ರಾನ್ಸ್‌ಟನೆಲ್‌ಸ್ಟ್ರಾಯ್ ಜಂಟಿಯಾಗಿ ಸುರಂಗವನ್ನು ನಿರ್ಮಿಸಿವೆ. ಅಫ್ಕಾನ್ಸ್ ಏಪ್ರಿಲ್ 2017 ರಲ್ಲಿ ಹೂಗ್ಲಿ ನದಿಯಲ್ಲಿ ಸುರಂಗ ಅಗೆದು ಜುಲೈ 2017 ರಲ್ಲಿ ಪೂರ್ಣಗೊಳಿಸಿತು.