ಸಾರಾಂಶ
ಮಥುರಾದ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣದಲ್ಲಿ, ಭವಿಷ್ಯದ ಎಲ್ಲಾ ಕಾನೂನು ಪ್ರಕ್ರಿಯೆಗಳಲ್ಲಿ ಈದ್ಗಾ ಮಸೀದಿಯನ್ನು ‘ವಿವಾದಿತ ರಚನೆ’ ಎಂದು ಅಧಿಕೃತವಾಗಿ ಉಲ್ಲೇಖಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅಲಹಾಬಾದ್: ಮಥುರಾದ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣದಲ್ಲಿ, ಭವಿಷ್ಯದ ಎಲ್ಲಾ ಕಾನೂನು ಪ್ರಕ್ರಿಯೆಗಳಲ್ಲಿ ಈದ್ಗಾ ಮಸೀದಿಯನ್ನು ‘ವಿವಾದಿತ ರಚನೆ’ ಎಂದು ಅಧಿಕೃತವಾಗಿ ಉಲ್ಲೇಖಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಅಲ್ಲದೆ, ಅಂತಹ ಘೋಷಣೆಯು ಇನ್ನೂ ವಿಚಾರಣೆಯಲ್ಲಿರುವ ಪ್ರಕರಣದ ಬಗ್ಗೆ ಪೂರ್ವಗ್ರಹ ಪೀಡಿತ ತೀರ್ಮಾನಕ್ಕೆ ಸಮವಾಗಿರುತ್ತದೆ ಎಂದು ಹೇಳಿದೆ.
ಏನಿದು ಪ್ರಕರಣ?:ಮಥುರಾದ ಶ್ರೀಕೃಷ್ಣನ ಮೂಲ ಜನ್ಮಸ್ಥಳದಲ್ಲಿ ದೇಗುಲವಿತ್ತು. ಮೊಘಲ್ ದೊರೆ ಔರಂಗಜೇಬನ ಆಳ್ವಿಕೆಯಲ್ಲಿ ದೇಗುಲವನ್ನು ನೆಲಸಮಗೊಳಿಸಿ, ಅದೇ ಜಾಗದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಹಾಗಾಗಿ ಮಸೀದಿಯನ್ನು ತೆರವುಗೊಳಿಸಬೇಕೆಂದು ಕೋರಿ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಈ ವಿಚಾರವಾಗಿ 1968ರಲ್ಲಿ ದೇವಾಲಯ ಪರ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ಮಸೀದಿ ಟ್ರಸ್ಟ್ ನಡುವೆ ರಾಜಿ ಒಪ್ಪಂದವಾಗಿತ್ತು. ಆ ಒಪ್ಪಂದವು ಎರಡೂ ಧಾರ್ಮಿಕ ಸ್ಥಳಗಳು ಒಂದೇ ಆವರಣದಲ್ಲಿ ಸಹಬಾಳ್ವೆ ನಡೆಸಲು ಮತ್ತು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಈ ಒಪ್ಪಂದದ ಕಾನೂನು ಸ್ಥಾನಮಾನ ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇವೆ. 2023ರಲ್ಲಿ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಅವರು, ಮಸೀದಿಯನ್ನು ‘ವಿವಾದಿತ ರಚನೆ’ ಎಂದು ಘೋಷಿಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬೆಂಬಲಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಂಥ 18 ಮೊಕದ್ದಮೆಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಿದ ನ್ಯಾ. ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ಏಕಸದಸ್ಯ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ.