ಉತ್ತರಾಖಂಡದಲ್ಲಿ ರಾಜ್ಯದ 9 ಜನ ಚಾರಣಿಗರು ಸಾವು

| Published : Jun 06 2024, 01:46 AM IST

ಉತ್ತರಾಖಂಡದಲ್ಲಿ ರಾಜ್ಯದ 9 ಜನ ಚಾರಣಿಗರು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಟ್ರೆಕ್ಕಿಂಗ್‌ ಮುಗಿಸಿ ಮರಳುವಾಗ ಹಿಮಗಾಳಿಗೆ ಸಿಲುಕಿ ಬಲಿಯಾಗಿದ್ದು, 13 ಮಂದಿ ರಕ್ಷಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಪರವಾಗಿ ಡೆಹ್ರಾಡೂನ್‌ಗೆ ಕೃಷ್ಣಬೈರೇಗೌಡ ದೌಡಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉತ್ತರಾಖಂಡದ ಸಹಸ್ರತಾಲ್‌ಗೆ ಟ್ರೆಕ್ಕಿಂಗ್‌ಗೆಂದು ತೆರಳಿದ್ದಾಗ ಪ್ರತಿಕೂಲ ಹವಾಮಾನದಿಂದಾಗಿ ರಾಜ್ಯದ 9 ಚಾರಣಿಗರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನುಳಿದ 13 ಮಂದಿಯನ್ನು ಭಾರತೀಯ ವಾಯುಪಡೆಯು ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ರಾಜ್ಯದ 21 ಚಾರಣಿಗರು ಹಾಗೂ ಓರ್ವ ಗೈಡ್‌ರನ್ನು ಒಳಗೊಂಡ ತಂಡವು ಮೇ 28ರಂದು ಟ್ರೆಕ್ಕಿಂಗ್‌ಗೆಂದು ಉತ್ತರಾಖಂಡಕ್ಕೆ ತೆರಳಿತ್ತು. ಉತ್ತರಕಾಶಿಯಿಂದ 35 ಕಿ.ಮೀ. ದೂರದ ಅತ್ಯಂತ ಕಠಿಣ ಹಾದಿಯ ಸಹಸ್ರತಾಲ್‌ ಮಯಳಿ ಎಂಬ ಎತ್ತರದ ಪ್ರದೇಶದಲ್ಲಿ ಜೂ.4ರಂದು ಬೆಳಗ್ಗೆ ಚಾರಣ ಆರಂಭಿಸಿತ್ತು. ಚಾರಣದ ಗಮ್ಯಸ್ಥಾನ ತಲುಪಿ ಬಳಿಕ ಶಿಬಿರಕ್ಕೆ (ಬೇಸ್‌ ಕ್ಯಾಂಪ್‌) ಹಿಂತಿರುಗುತ್ತಿದ್ದಾಗ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಿಮಗಾಳಿಯಿಂದಾಗಿ ಅಪಾಯಕ್ಕೆ ಸಿಲುಕಿ 9 ಚಾರಣಿಗರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನುಳಿದ ಚಾರಣಿಗರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯವಾಗಿ ಲಭ್ಯವಿದ್ದ ಹೆಲಿಕಾಪ್ಟರ್‌ಗಳ ಸಹಾಯದಿಂದ ಮಂಗಳವಾರ ಸಂಜೆಯೇ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ರಾಜ್ಯ ಸರ್ಕಾರವೂ ಜೂ.4ರಂದು ರಾತ್ರಿಯೇ ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಕೇಂದ್ರ ಗೃಹ ಇಲಾಖೆಯನ್ನು ಸಂಪರ್ಕಿಸಿ ಸಹಕಾರ ಕೋರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಖುದ್ದು ಉತ್ತರಾಖಂಡಕ್ಕೆ ತೆರಳಿದ್ದಾರೆ.

ಬುಧವಾರ ಬೆಳಿಗ್ಗೆ 9 ಗಂಟೆಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಸಹ ಚಾರಣಿಗರ ರಕ್ಷಣೆಗಾಗಿ ಉತ್ತರಕಾಶಿ ತಲುಪಿದೆ. ಮತ್ತೊಂದೆಡೆ, ವಿಪತ್ತು ನಿರ್ವಹಣಾ ಪಡೆಯೂ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಿದೆ. ಹಿಮಾಲಯನ್ ವ್ಯೂ ಅಡ್ವೆಂಚರ್ ಕಂಪನಿಯು ಪರ್ವತಾರೋಹಣಕ್ಕಾಗಿ ಕರ್ನಾಟಕದಿಂದ 22 ಜನರನ್ನು ಕರೆದುಕೊಂಡು ಹೋಗಿದ್ದಾಗ ಈ ದುರಂತ ಸಂಭವಿಸಿದೆ.

ದುರಂತದಲ್ಲಿ ಮೃತಪಟ್ಟವರ ಪೈಕಿ ಸುಜಾತ ಮುಂಗುರುವಾಡಿ(52), ಸಿಂಧು ವಕೆಕಲಾಂ(47), ಚಿತ್ರಾ ಪ್ರಣೀತ್‌ (48), ಆಶಾ ಸುಧಾಕರ (72), ವಿನಾಯಕ್ ಮುಂಗುರವಾಡಿ ಅವರ ಮೃತದೇಹ ಪತ್ತೆಯಾಗಿವೆ. ಆದರೆ, ಪದ್ಮಿನಿ (45), ವೆಂಕಟೇಶ್‌ ಪ್ರಸಾದ್‌ (52), ಅನಿತಾ (61), ಪದ್ಮನಾಭನ್ (50) ಶವ ಪತ್ತೆಯಾಗಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಾಚರಣೆಗೆ ಬುಧವಾರ ಸ್ವಲ್ಪ ಅಡ್ಡಿ ಉಂಟಾಯಿತು. ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

ಹಿಮಗಾಳಿಯಂದ ಸಂಕಷ್ಟಕ್ಕೆ ಒಳಗಾಗಿದ್ದ ಇನ್ನುಳಿದ ಚಾರಣಿಗರನ್ನು ರಕ್ಷಿಸಿ ಉತ್ತರ ಕಾಶಿ ಮತ್ತು ಡೆಹ್ರಾಡೂನ್‌ಗೆ ಕರೆದೊಯ್ಯಲಾಗಿದೆ. ಸೌಮ್ಯ ಕನಲೆ (36), ಸೀನಾ ಲಕ್ಷ್ಮೀ (48), ಎಸ್‌.ಶಿವಜ್ಯೋತಿ (48), ಸ್ಮೃತಿ ಡೋಲಸ್‌ (41), ಮಧುಕಿರಣ್‌ ರೆಡ್ಡಿ (52), ಜಯಪ್ರಕಾಶ್‌ ಬಿ.ಎಸ್‌. (61), ಭರತ್‌ ಬೊಮ್ಮನಗೌಡರ್‌ (53), ಅನಿಲ್‌ ಭಟ್ಟ (52) ರನ್ನು ರಕ್ಷಿಸಿ ಡೆಹ್ರಾಡೂನ್‌ಗೆ ಹಾಗೂ ವಿನಯ್‌ ಎಂ.ಕೆ. (49), ಎಸ್‌.ಸುಧಾಕರ್‌ (64), ವಿವೇಕ್‌ ಶ್ರೀಧರ್‌ (42), ರಿತಿಕಾ ಜಿಂದಾಲ್‌ ಮತ್ತು ನವೀನ್‌ ಎ. ಅವರನ್ನು ಉತ್ತರಕಾಶಿಗೆ ಕರೆದೊಯ್ಯಲಾಗಿದೆ.ವಿಪುಲ್‌ ಬನ್ಸಲ್‌ ಸಮನ್ವಯಾಧಿಕಾರಿ

ಉತ್ತರಾಖಂಡ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಕಾರ್ಯಾಚರಣೆಯ ಮಾಹಿತಿ ಪಡೆಯಲು, ಚಾರಣಿಗರ ಕ್ಷೇಮ ವಿಚಾರಣೆಗೆಂದು ರಾಜ್ಯ ಸರ್ಕಾರವು ಐಎಎಸ್‌ ಅಧಿಕಾರಿ ವಿಪುಲ್‌ ಬನ್ಸಲ್‌ ಅವರನ್ನು ನೇಮಕ ಮಾಡಿದೆ.

ಡೆಹ್ರಾಡೂನ್‌ಗೆ ಕೃಷ್ಣಬೈರೇಗೌಡ ದೌಡು

ಹಿಮ ಗಾಳಿಯಿಂದಾಗಿ ಉತ್ತರಾಖಂಡದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯಾಚರಣೆಗೆ ಸಹಕಾರ ನೀಡಲು ಖುದ್ದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತೆರಳಿದ್ದಾರೆ. ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಕೃಷ್ಣ ಬೈರೇಗೌಡ, ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಉತ್ತರಾಖಂಡ ಸರ್ಕಾರದೊಂದಿಗೆ ಮಾತನಾಡಿರುವ ಬಗ್ಗೆ ಮಾಹಿತಿ ನೀಡಿದರು. ಆಗ ಸಿದ್ದರಾಮಯ್ಯ ಅವರು ‘ಖುದ್ದು ನೀವೇ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕು’ ಎಂದು ಸೂಚನೆ ನೀಡಿದ್ದರಿಂದ ಬುಧವಾರ ಮಧ್ಯಾಹ್ನವೇ ಡೆಹ್ರಾಡೂನ್‌ಗೆ ತೆರಳಿದ್ದಾರೆ.

ಅಗತ್ಯ ಕ್ರಮಕ್ಕೆ ಸಿದ್ದು ಸೂಚನೆ

ಉತ್ತರಾಖಂಡದ ಸಹಸ್ರತಾಲ್‌ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸಬೇಕು. ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕೆಲಸ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ಅವರು ಡೆಹ್ರಾಡೂನ್‌ನಲ್ಲಿರುವ ಸಚಿವ ಕೃಷ್ಣಬೈರೇಗೌಡ ಅವರಿಗೆ ಸೂಚನೆಯನ್ನೂ ನೀಡಿದ್ದಾರೆ.

‘ಮೃತರ ಸಂಖ್ಯೆ 9ಕ್ಕೆ ಏರಿದ ಸಂಗತಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲೂ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು’ ಎಂದು ಸಿದ್ದರಾಮಯ್ಯ ಅವರು ಕೃಷ್ಣಬೈರೇಗೌಡರಿಗೆ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ ಅನಿಲ್‌ ಭಟ್‌ ಎಂಬುವರ ಜೊತೆಯೂ ಸಿದ್ದರಾಮಯ್ಯ ಮಾತನಾಡಿ ಧೈರ್ಯ ತುಂಬಿದ್ದಾರೆ.

ಕರ್ನಾಟಕದಿಂದ 22 ಜನರು ಚಾರಣಕ್ಕಾಗಿ ಮೇ 28ರಂದು ಉತ್ತರಾಖಂಡಕ್ಕೆ ತೆರಳಿದ್ದರು. ಗಮ್ಯ ತಲುಪಿ ವಾಪಸಾಗುತ್ತಿದ್ದಾಗ ಹಿಮಗಾಳಿಗೆ ಸಿಲುಕಿ 9 ಮಂದಿ ಸಾವು. ಇನ್ನುಳಿದವರನ್ನು ಮಂಗಳವಾರ ಮಧ್ಯಾಹ್ನ 2ರ ವೇಳೆ ರಕ್ಷಣೆ ಮಾಡಲಾಗಿದ್ದು, ಉತ್ತರಾಖಂಡದ ಸಹಸ್ರತಾಲ್‌ ಪರ್ವತ ಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದೆ.