ಆಸ್ಕರ್‌ ರೇಸ್‌ನಲ್ಲಿ ಹಿಂದಿ ಭಾಷೆಯ 'ಲಾಪತಾ ಲೇಡೀಸ್‌' : 2025ರ ಪ್ರಶಸ್ತಿಗೆ ಭಾರತದಿಂದ ಆಯ್ಕೆ

| Published : Sep 24 2024, 01:46 AM IST / Updated: Sep 24 2024, 07:05 AM IST

ಸಾರಾಂಶ

2025ರ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ಹಿಂದಿ ಭಾಷೆಯ ‘ಲಾಪತಾ ಲೇಡೀಸ್‌’ ಚಿತ್ರ ಅಧಿಕೃತ ಪ್ರವೇಶ ಪಡೆದಿದೆ. ಕಿರಣ್‌ ರಾವ್‌ ನಿರ್ದೇಶನ, ಆಮೀರ್‌ ಖಾನ್‌ ನಿರ್ಮಾಣದ ಈ ಚಿತ್ರವು 2001ರ ಸಮಯದ ಪಿತೃಪ್ರಧಾನ ಸಮಾಜದ ಕಥೆಯನ್ನು ಹೊಂದಿದೆ.

ಚೆನ್ನೈ: 2025ರ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ಹಿಂದಿ ಭಾಷೆಯ ‘ಲಾಪತಾ ಲೇಡೀಸ್‌’ ಚಿತ್ರ ಅಧಿಕೃತ ಪ್ರವೇಶ ಪಡೆದಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಘೋಷಿಸಿದೆ.

ಬಾಲಿವುಡ್‌ನ ಅನಿಮಲ್‌, ಮಲಯಾಳಂನ ರಾಷ್ಟ್ರಪ್ರಶಸ್ತಿ ವಿಜೇತ ಆಟಂ ಹಾಗೂ ಕೇನ್ಸ್‌ ಪ್ರಶಸ್ತಿ ಪಡೆದ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ ಸೇರಿದಂತೆ 29 ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಅವನ್ನು ಹಿಂದಿಕ್ಕಿ ಲಾಪತಾ ಲೇಡೀಸ್‌ ಆಯ್ಕೆಯಾಗಿದೆ.

ಕಿರಣ್‌ ರಾವ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ನಟ ಆಮೀರ್‌ ಖಾನ್‌ ನಿರ್ಮಿಸಿದ್ದು, ಇದು 2001ರ ಸಮಯದ ಪಿತೃಪ್ರಧಾನ ಸಮಾಜದ ಬಗೆಗಿನ ಕಥೆಯಾಗಿದೆ. ಚಿತ್ರದಲ್ಲಿ 2 ವಿವಾಹಿತೆಯರು ರೈಲು ಪ್ರಯಾಣದ ವೇಳೆ ಅದಲು ಬದಲಾದ ಕತೆಯನ್ನು ಇದು ಹೊಂದಿದೆ.

2002ರಲ್ಲಿ ಅಮೀರ್‌ ಖಾನ್‌ ನಟನೆಯ ‘ಲಗಾನ್‌’ ಬಳಿಕ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಯಾವುದೇ ಚಿತ್ರ ಆಯ್ಕೆಯಾಗಿಲ್ಲ. ಹೀಗಾಗಿ ಈ ಸಲ ಅಮೀರ್‌ ನಿರ್ಮಾಣದ ಲಾಪತಾ ಲೇಡೀಸ್‌ ಪ್ರಶಸ್ತಿ ಗಿಟ್ಟಿಸಬಹುದೇ ಎಂಬ ಕುತೂಹಲ ಮೂಡಿದೆ.