ಎಲ್‌ ಆ್ಯಂಡ್‌ ಟಿ ಸಂಸ್ಥೆಯ ಸಿಇಒ ಸುಬ್ರಹ್ಮಣ್ಯನ್‌, ‘ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ ಕಾರ್ಮಿಕರು ಊರು ಬಿಟ್ಟು ಸ್ಥಳಾಂತರಗೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಮೂಲಸೌಕರ್ಯ ಯೋಜನೆ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ’ ಎಂದು ಹೇಳಿದ್ದಾರೆ.

ನವದೆಹಲಿ: ಭಾನುವಾರವೂ ರಜೆ ಪಡೆಯದೆ ವಾರದಲ್ಲಿ 90 ತಾಸು ಕೆಲಸ ಮಾಡುವುದನ್ನು ಪ್ರತಿಪಾದಿಸಿದ್ದ ಎಲ್‌ ಆ್ಯಂಡ್‌ ಟಿ ಸಂಸ್ಥೆಯ ಸಿಇಒ ಸುಬ್ರಹ್ಮಣ್ಯನ್‌, ‘ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ ಕಾರ್ಮಿಕರು ಊರು ಬಿಟ್ಟು ಸ್ಥಳಾಂತರಗೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಮೂಲಸೌಕರ್ಯ ಯೋಜನೆ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ’ ಎಂದು ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಮಿಸ್ಟಿಕ್‌ ಸೌತ್‌ ಗ್ಲೋಬಲ್‌ ಲಿಂಕೇಜ್‌ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ನರೇಗಾ, ಡಿಬಿಟಿ ಹಾಗೂ ಜನ್‌ ಧನ್‌ಗಳಂತಹ ಯೋಜನೆಗಳು ಕಾರ್ಮಿಕರ ಸ್ಥಳಾಂತರದ ಮೇಲೆ ಪರಿಣಾಮ ಬೀರುತ್ತಿವೆ. ಇವುಗಳಿಂದಾಗಿ ಅವರ ಊರುಗಳ ಆರ್ಥಿಕತೆ ಉತ್ತಮಗೊಂಡಿರಬೇಕು. ತಮ್ಮ ತವರಲ್ಲೇ ಸುಖಜೀವನ ನಡೆಸುತ್ತಿರುವ ಜನ ಊರುಗಳನ್ನು ಬಿಟ್ಟು ಬರಲು ತಯಾರಿರದ ಕಾರಣ ಉದ್ಯಮಗಳಿಗೆ ಕಾರ್ಮಿಕರ ಕೊರತೆ ಉಂಟಾಗಿದೆ’ ಎಂದರು. ಜೊತೆಗೆ, ಕಾರ್ಮಿಕರ ಕೊರತೆಯಿಂದಾಗಿ ಭಾರತದ ಮೂಲಸೌಕರ್ಯ ನಿರ್ಮಾಣದ ಮೇಲೆಯೂ ಪರಿಣಾವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ತಮ್ಮ ಕಂಪನಿಯದೇ ಉದಾಹರಣೆ ನೀಡುತ್ತಾ, ‘ಎಲ್‌ ಆ್ಯಂಡ್‌ ಟಿ ಗೆ 4 ಲಕ್ಷ ನೌಕರರ ಅವಶ್ಯಕತೆಯಿದೆ. ಆದರೆ, ನೇಮಕಗೊಂಡವರೆಲ್ಲ ಬಿಟ್ಟುಹೋಗುತ್ತಿರುವುದರಿಂದ 16 ಲಕ್ಷ ಜನರನ್ನು ಸೇರಿಸಿಕೊಳ್ಳುವಂತಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತದಲ್ಲಿ ನೀಡುವುದಕ್ಕಿಂತ 3.5 ಪಟ್ಟು ಅಧಿಕ ಸಂಭಾವನೆ ನೀಡಿ ನೌಕರರನ್ನು ಆಕರ್ಷಿಸುತ್ತಿವೆ. ಇಲ್ಲಿಯೂ ಹಣದುಬ್ಬರಕ್ಕೆ ಅನುಸಾರವಾಗಿ ವೇತನವನ್ನು ಪರಿಷ್ಕರಿಸುವುದು ಅಗತ್ಯ’ ಎಂದರು.

ಈ ಮೊದಲು, ಭಾನುವಾರವೂ ಕೆಲಸ ಮಾಡುವಂತೆ ಕರೆ ನೀಡಿದ್ದ ಸುಬ್ರಹ್ಮಣಿಯನ್‌, ‘ಮನೆಯಲ್ಲಿ ಕುಳಿತು ಎಷ್ಟು ಹೊತ್ತು ಹೆಂಡತಿ ಮುಖ ನೋಡುತ್ತೀರಾ?’ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಅವರ ಈ ನಿಲುವಿಗೆ ಸೀರಂ ಇನ್ಸ್‌ಟಿಟ್ಯೂಟ್‌ ಸಿಇಒ ಅದರ್‌ ಪೂನಾವಾಲಾ, ಆನಂದ್‌ ಮಹಿಂದ್ರಾ, ಐಟಿಸಿಯ ಸಂಜೀವ್‌ ಪುರಿ ವಿರೋಧ ವ್ಯಕ್ತಪಡಿಸಿದ್ದರು.