ಪಟನಾ: ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಹಾಗೂ ಅವರ ಪತ್ನಿ ರಾಬ್ರಿ ದೇವಿಗೆ ನೀಡಲಾಗಿದ್ದ ಝಡ್‌-ಪ್ಲಸ್‌ ಶ್ರೇಣಿಯ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದ ಬೆನ್ನಲ್ಲೇ, ಆರ್‌ಜೆಡಿ ಪಕ್ಷದ ಕಾರ್ಯಕರ್ತರು ಲಾಠಿ ಹಿಡಿದು ಅವರ ಮನೆಯ ಕಾವಲಿಗೆ ನಿಂತಿದ್ದಾರೆ.ವಿಐಪಿಗಳಿಗೆ ನೀಡಲಾಗಿದ್ದ ಭದ್ರತೆಯ ಪರಿಶೀಲನೆಯ ಬಳಿಕ ಝಡ್‌-ಪ್ಲಸ್‌ ಭದ್ರತೆಯನ್ನು ಹಿಂಪಡೆದು ಲಾಲು ನಿವಾಸಕ್ಕೆ ಬಿಹಾರದ ಬಿಎಸ್‌ಎಪಿ ಪಡೆಯನ್ನು ಕಾವಲಿಗೆ ನಿಯೋಜಿಸಲಾಗಿತ್ತು. ಇದೀಗ ಅವರ ಮನೆಯೆದುರು ಬಿಎಸ್‌ಎಪಿಯಿಂದ 2-8 ಗೃಹರಕ್ಷಕರು, ಪಾಟ್ನಾ ಜಿಲ್ಲಾ ಪಡೆಯಿಂದ ಇಬ್ಬರು ಅಂಗರಕ್ಷಕರು, ಪೈಲಟ್ ಮತ್ತು ಗುಂಡು ನಿರೋಧಕ ಕಾರು ನಿಯೋಜನೆಯಾಗಿದೆ. ಇದರೊಂದಿಗೆ ಕಾರ್ಯಕರ್ತರೂ ಸ್ವಯಂಪ್ರೇರಿತರಾಗಿ ಕಾವಲಿಗೆ ಕೂತಿದ್ದಾರೆ.

ಅತ್ತ ಲಾಲು ಪುತ್ರ, ವಿಧಾನಸಭೆಯ ವಿಪಕ್ಷ ನಾಯಕ ತೇಜಸ್ವಿ ಯಾದವ್ ಕೂಡ ತಮ್ಮ ವೈ-ಶ್ರೇಣಿಯ ಭದ್ರತೆಯನ್ನು ವಾಪಸ್ ಕಳುಹಿಸಿದ್ದಾರೆ.

ಅಣ್ಣಾಮಲೈ ಜನಾಂದೋಲನಕ್ಕೆ 14 ಲಕ್ಷ ಜನ ನೋಂದಣಿ

ಬಿಜೆಪಿಗೆ ರಾಜೀನಾಮೆ ನೀಡಿ ಸದ್ಯಕ್ಕೆ ರಾಜಕೀಯೇತರ ಜನಾಂದೋಲನಕ್ಕೆ ಮುಂದಾಗಿರುವ ತಮಿಳುನಾಡಿನ ನಾಯಕ ಕೆ. ಅಣ್ಣಾಮಲೈ ಅವರಿಗೆ ಶನಿವಾರವೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅವರ ‘ವಿ ದ ಲೀಡರ್ಸ್‌ ಫೌಂಡೇಶನ್‌’ ಹೆಸರಿನ ಜನಾಂದೋಲನದ ವೆಬ್‌ಗೆ ಶನಿವಾರದವರೆಗೆ 14 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ.ಜೂ.5ರಂದು ಅಣ್ಣಾಮಲೈ ಬಿಜೆಪಿ ತೊರೆದಿದ್ದರು ಮತ್ತು ಕೆಲವೇ ನಿಮಿಷಗಳಲ್ಲಿ ತಮ್ಮದೇ ಆದ ರಾಜಕೀಯ ಆಂದೋಲನವನ್ನು ಪ್ರಾರಂಭಿಸುವ ಯೋಜನೆಯನ್ನು ಘೋಷಿಸಿದ್ದರು.


ಎಐಎಡಿಎಂಕೆಗೆ ಹಿನ್ನಡೆ: ಪಕ್ಷದ 4 ನಾಯಕರು ಟಿವಿಕೆಗೆ ಸೇರ್ಪಡೆ

ಚೆನ್ನೈ: ಆಂತರಿಕ ಬಿಕ್ಕಟ್ಟಿನ ನಡುವೆ ಎಐಎಡಿಎಂಕೆ ಮತ್ತೊಂದು ಹಿನ್ನಡೆ ಅನುಭವಿಸಿದೆ. ಪಕ್ಷದ 4 ಪ್ರಮುಖ ನಾಯಕರು ಆಡಳಿತಾರೂಢ ಟಿವಿಕೆಗೆ ಶನಿವಾರ ಇಲ್ಲಿಯ ಅದರ ಪ್ರಧಾನ ಕಚೇರಿಯಲ್ಲಿ ಸೇರ್ಪಡೆಯಾಗಿದ್ದಾರೆ.ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ (ಎಐಎಡಿಎಂಕೆ) ಉಡುಮಲೈ ಕೆ.ರಾಧಾಕೃಷ್ಣನ್, ಎಂ.ಸಿ.ಸಂಪತ್, ಕಡಂಬೂರ್ ಸಿ.ರಾಜು ಮತ್ತು ಎನ್.ಆರ್.ಶಿವಪತಿ ಅವರು ತಮಿಳಗ ವೆಟ್ರಿ ಕಳಗಂನ (ಟಿವಿಕೆ) ಪ್ರಧಾನ ಕಾರ್ಯದರ್ಶಿ ಆನಂದ್‌ ಹಾಗೂ ಚುನಾವಣಾ ಪ್ರಚಾರ ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಆಧವ್‌ ಅರ್ಜುನ್‌ ಸಮ್ಮುಖ ಟಿವಿಕೆಗೆ ಸೇರಿದರು.

ವಿಧಾನಸಭೆ ಚುನಾವಣೆ ನಂತರ ಎಐಎಡಿಎಂಕೆ ಅನುಭವಿಸುತ್ತಿರುವ ಹಿನ್ನಡೆಗಳಲ್ಲಿ ಇದು ಹೊಸ ವಿದ್ಯಮಾನವಾಗಿದೆ. ಮೇ 29ರಂದು 300ಕ್ಕೂ ಹೆಚ್ಚು ಎಐಎಡಿಎಂಕೆ ಸದಸ್ಯರು ಟಿವಿಕೆ ಸೇರಿದ್ದರು.

ಟಿವಿಕೆ ಬೆಂಬಲಿಸಿ ಎಂದು ಮಿತ್ರರಿಗೆ ಹೇಳಿದ್ದು ನಾವೇ: ಸ್ಟಾಲಿನ್‌ 

ಚೆನ್ನೈ: ‘ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ನೀಡಬಾರದು ಎಂಬ ಏಕೈಕ ಉದ್ದೇಶದಿಂದ ನಾವು ನಮ್ಮ ಮಿತ್ರ ಪಕ್ಷಗಳಿಗೆ ಟಿವಿಕೆ ಸರ್ಕಾರ ಬೆಂಬಲಿಸಲು ಅವಕಾಶ ನೀಡಿದೆವು’ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ತಿಳಿಸಿದ್ದಾರೆ.

ಡಿಎಂಕೆ ಸೇರ್ಪಡೆಯಾದ ಎಐಎಡಿಎಂಕೆ ಕಾರ್ಯಕರ್ತರನ್ನು ಸ್ವಾಗತಿಸಿ ಶನಿವಾರ ಮಾತನಾಡಿದ ಅವರು, ‘ಮೈತ್ರಿಕೂಟದ ಪಕ್ಷಗಳು ನನ್ನ ಬಳಿ ಬಂದು ಟಿವಿಕೆಗೆ ಬೆಂಬಲ ನೀಡುವ ಯೋಜನೆ ಕುರಿತು ಪ್ರಸ್ತಾಪಿಸಿದಾಗ ನಾನು ಅದು ನಿಮ್ಮ ಆಯ್ಕೆ ಮತ್ತು ಅದು ನಿಮ್ಮ ಪ್ರಜಾಪ್ರಭುತ್ವ ಹಕ್ಕು. ನಾನು ನಿಮ್ಮನ್ನು ತಡೆಯುವುದಿಲ್ಲ ಎಂದು ಹೇಳಿದೆ. ಯಾಕೆಂದರೆ ಅವರ ಈ ಯೋಜನೆಯ ಮೂಲ ಉದ್ದೇಶ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದನ್ನು ತಡೆಯುವುದೇ ಆಗಿತ್ತು. ಒಂದು ವೇಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಜಾರಿಯಾದರೆ ಅದು ಬಿಜೆಪಿ ಆಳ್ವಿಕೆಗೆ ದಾರಿ ಮಾಡಿಕೊಡಬಹುದಿತ್ತು’ ಎಂದು ಹೇಳಿದರು.ಇದೇ ವೇಳೆ, ‘ಡಿಎಂಕೆ ಅಧಿಕಾರಕ್ಕೆ ಬರಬೇಕು ಎಂದು ನಂಬಿಕೆ ಇರಿಸಿಕೊಂಡು ನಮ್ಮ ಜತೆಗೆ ಕೈಜೋಡಿಸಿದ ಮಿತ್ರಪಕ್ಷಗಳಿಗೆ ಕೃತಜ್ಞತನಾಗಿದ್ದೇನೆ’ ಎಂದು ಇದೇ ವೇಳೆ ಸ್ಟಾಲಿನ್‌ ಹೇಳಿದರು.

ರಷ್ಯಾದ 2ನೇ ದೊಡ್ಡ ನಗರದ ಮೇಲೆ ಉಕ್ರೇನ್‌ ವಾಯುದಾಳಿ

ಸೇಂಟ್‌ ಪೀಟರ್ಸ್‌ಬರ್ಗ್‌: 4 ವರ್ಷದಿಂದ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್ಕಿ ಕಳಿಸಿದ್ದ ಮಾತುಕತೆ ಪ್ರಸ್ತಾವನೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಿರಸ್ಕರಿಸಿದ ಬೆನ್ನಲ್ಲೇ ರಷ್ಯಾದ 2ನೇ ಅತಿದೊಡ್ಡ ನಗರವಾಗಿರುವ ಸೇಂಟ್‌ ಪೀಟರ್ಸ್‌ಬರ್ಗ್‌ ಮೇಲೆ ಶನಿವಾರ ಬೆಳಗ್ಗೆ ಉಕ್ರೇನ್‌ ಭೀಕರ ವಾಯುದಾಳಿ ನಡೆಸಿದೆ.ಬುಧವಾರವಷ್ಟೇ ರಷ್ಯಾದ ತೈಲ ಘಟಕ ಮತ್ತು ಸೇನಾ ನೆಲೆಯನ್ನು ಗುರಿಯಾಗಿಸಿ ದಾಳಿ ಮಾಡಿದ್ದ ಉಕ್ರೇನ್‌ ಶನಿವಾರ ನೂರಾರು ಡ್ರೋನ್‌ಗಳನ್ನು ಹಾರಿಸಿದ್ದು, ಅದರಲ್ಲಿ 376 ಡ್ರೋನ್‌ಗಳನ್ನು ಧ್ವಂಸ ಮಾಡಲಾಗಿದೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ರಷ್ಯಾದ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.