ಸಾರಾಂಶ
ಲ್ಯಾಂಡ್‌ಲೈನ್ ಸಂಖ್ಯೆಯಲ್ಲಿ ಬಹುದೊಡ್ಡ ಬದಲಾವಣೆ ತರಲು ಮುಂದಾಗಿರುವ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಎಸ್‌ಟಿಡಿಗೆ ವಿದಾಯ ಹೇಳುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ.
ನವದೆಹಲಿ: ಲ್ಯಾಂಡ್‌ಲೈನ್ ಸಂಖ್ಯೆಯಲ್ಲಿ ಬಹುದೊಡ್ಡ ಬದಲಾವಣೆ ತರಲು ಮುಂದಾಗಿರುವ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಎಸ್‌ಟಿಡಿಗೆ ವಿದಾಯ ಹೇಳುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಇದು ಕೇಂದ್ರದಿಂದ ಅನುಮೋದಿಸಲ್ಪಟ್ಟಲ್ಲಿ, ಇನ್ನುಮುಂದೆ ಟೆಲಿಫೋನ್ ಬಳಕೆದಾರರು ಸ್ಥಳೀಯ ಕರೆಗಳನ್ನು ಮಾಡಲು ಎಲ್ಲಾ 10 ಅಂಕಿಗಳನ್ನು ಡಯಲ್ ಮಾಡುವುದು ಕಡ್ಡಾಯವಾಗಲಿದೆ.
ಏನು ಬದಲಾವಣೆ?:
ಈವರೆಗೆ ಬಳಕೆಯಲ್ಲಿರುವ ಎಸ್‌ಟಿಡಿ ವ್ಯವಸ್ಥೆಯ ಬದಲು ಇನ್ನುಮುಂದೆ 10 ಅಂಕಿಗಳ ಪರವಾನಗಿ ಪಡೆದ ಸೇವಾ ಪ್ರದೇಶ (ಎಲ್‌ಎಸ್‌ಎ) ಬಳಸಲಾಗುವುದು. ಇದನ್ನು ಬೃಹತ್ ನಗರಗಳಿಗೆ ಅಥವಾ ರಾಜ್ಯಗಳಿಗೆ ನೀಡಲಾಗುವುದು. ಆದರೆ ಈಗಿರುವ ಚಂದಾದಾರ ದೂರವಾಣಿಸಂಖ್ಯೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ಈ ಬದಲಾವಣೆಯೇಕೆ?:
ಈಗಾಗಲೇ ಹಲವರು ಟೆಲೆಫೋನ್ ಬಳಕೆಯನ್ನು ಬಿಟ್ಟಿದ್ದರೂ ಅವರ ಸಂಖ್ಯೆಗಳನ್ನು ಬೇರೆಯವರಿಗೆ ಕೊಡಲಾಗಿಲ್ಲ. ಇದರಿಂದಾಗಿ ಸಂಖ್ಯೆಗಳ ಕೊರತೆ ಎದುರಾಗಿದೆ. ಇದಕ್ಕೆ ಪರಿಹಾರವಾಗಿ, ಬಳಕೆಯಲ್ಲಿಲ್ಲದ ಸಂಖ್ಯೆಗಳನ್ನು ಬೇರೆ ಜಿಲ್ಲೆಗೆ ನೀಡಲಾಗುವುದು.
ಇನ್ನು ಡಯಲ್ ಮಾಡೋದು ಹೇಗೆ?:
ಇನ್ನುಮುಂದೆ ಟೆಲಿಫೋನ್ ಬಳಕೆದಾರರು ಮೊದಲು 0 ಯನ್ನು ಒತ್ತಿ, ಬಳಿಕ 4 ಅಂಕಿಯ ಎಸ್‌ಡಿಸಿಎ ಹಾಗೂ 6 ಅಂಕಿಯ ಚಂದಾದಾರರ ಸಂಖ್ಯೆಯನ್ನು ಡಯಲ್ ಮಾಡಬೇಕು.