ಸಾರಾಂಶ
ನವದೆಹಲಿ: ಉಷ್ಣ ಮಾರುತಗಳ ದೇಶವನ್ನು ಆವರಿಸಿರುವ ಹೊತ್ತಿನಲ್ಲೇ, ಜೂನ್ ಮೊದಲ ವಾರದಿಂದ ಆರಂಭವಾಗಲಿರುವ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಇರುವ ಕುರಿತಾದ ಸುಳಿವುಗಳು ದೊರಕಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ಮೂಲಕ ಪ್ರಸಕ್ತ ವರ್ಷದ ಮುಂಗಾರಿನ ಕುರಿತು ಮೊದಲ ಬಾರಿಗೆ ಶುಭ ಸುದ್ದಿ ನೀಡಿವೆ.
ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಭಾರತೀಯ ಹವಾಮಾನ ಸಂಸ್ಥೆಯ ಮುಖ್ಯಸ್ಥ ಮೃತ್ಯುಂಜಯ್ ಮಹಾಪಾತ್ರ, ‘ಮುಂಗಾರು ಮಾರುತಗಳ ಮೇಲೆ ಅಡ್ಡ ಪರಿಣಾಮ ಬೀರಬಹುದಾಗಿದ್ದ ಎಲ್ ನಿನೋದ ಪರಿಣಾಮಗಳು ದೂರವಾಗುತ್ತಿವೆ ಮತ್ತು ಯುರೇಶ್ಯಾ ಪ್ರದೇಶದಲ್ಲಿ ಹಿಮ ಆವರಿಸಿಕೊಳ್ಳುವ ಪ್ರಮಾಣವೂ ಇಳಿಕೆಯಾಗಿದೆ. ಇದು ಈ ಬಾರಿ ಸಾಮಾನ್ಯ ಮುಂಗಾರು ಮಳೆ ಸುರಿಯುವ ಮುನ್ಸೂಚನೆಗಳು’ ಎಂದು ಹೇಳಿದ್ದಾರೆ.
ಪ್ರಸಕ್ತ ಇರುವ ಎಲ್ ನಿನೋದ ಪರಿಣಾಮಗಳು ಜೂನ್ ವೇಳೆಗೆ ತಟಸ್ಥವಾಗಲಿದೆ. ತಟಸ್ಥ ಪರಿಸ್ಥಿತಿ ಭಾರತದ ಮುಂಗಾರು ಮಾರುತಗಳಿಗೆ ಉತ್ತಮ. ಮತ್ತೊಂದೆಡೆ ಜುಲೈ-ಸೆಪ್ಟೆಂಬರ್‌ನಲ್ಲಿ ಲಾ ನಿನೋ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ಕೂಡಾ ಉತ್ತಮ ಮಳೆಗೆ ಪೂರಕವಾದದು ಎಂದು ಮಹಾಪಾತ್ರ ಹೇಳಿದ್ದಾರೆ.
ಭಾರತದಲ್ಲಿ ದೀರ್ಘಕಾಲೀನ ಸರಾಸರಿ ಅನ್ವಯ ಮುಂಗಾರು ಮಳೆಯ ಪ್ರಮಾಣ ವಾರ್ಷಿಕ 868.6 ಮಿ.ಮೀನಷ್ಟಿದೆ. ಆದರೆ 2023ರಲ್ಲಿ 820 ಮಿ.ಮೀನಷ್ಟು ಮಾತ್ರವೇ ಮಳೆ ಸುರಿದಿತ್ತು.