ಸಾರಾಂಶ
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬೆದರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ‘ವ್ಯಸನ ಮುಕ್ತ ಭಾರತ’ ನಿರ್ಮಾಣಕ್ಕೆ ಜನತೆ ಮತ್ತು ಸಂಸ್ಥೆಗಳು ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.
ಭಾನುವಾರದಂದು 112ನೇ ‘ಮನ್ ಕೀ ಬಾತ್’ ಆಕಾಶವಾಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಮ್ಮ ಮಕ್ಕಳು ಮಾದಕ ವಸ್ತುಗಳ ವಶವಾಗಬಹುದು ಎಂಬ ಹೆದರಿಕೆ ಪ್ರತಿ ಪರಿವಾರದಲ್ಲಿಯೂ ಇರುತ್ತದೆ. ಅಂಥವರಿಗೆ ಸಹಾಯ ಮಾಡಲು ಸರ್ಕಾರ ‘ಮಾನಸ್’ ಹೆಸರಿನ ಕೇಂದ್ರಗಳನ್ನು ತೆರೆದಿದ್ದು, ವ್ಯಸನದ ವಿರುದ್ಧದ ಹೋರಾಟದಲ್ಲಿ ಇದು ದೊಡ್ಡ ಹೆಜ್ಜೆ’ ಎಂದರು.
ಇತ್ತೀಚೆಗೆ ಸರ್ಕಾರ ಬಿಡುಗಡೆಗೊಳಿಸಿದ ಡ್ರಗ್ಸ್ ಸಹಾಯವಾಣಿ 1933 ಸಂಖ್ಯೆಗೆ ಕರೆ ಮಾಡಿ ವ್ಯಸನದ ಬಗ್ಗೆ ಮಾಹಿತಿ ಅಥವಾ ಸಲಹೆ ಪಡೆಯಬೇಕು ಹಾಗೂ ಭಾರತವನ್ನು ವ್ಯಸನಮುಕ್ತ ಗೊಳಿಸಲು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮೋದಿ ಕರೆ ನೀಡಿದರು.
---
ತಿರಂಗಾ ಸೆಲ್ಫಿ ಹಾಕಿ, ನನಗೆ ಸಲಹೆ ನೀಡಿ: ಮೋದಿ
ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಿದ ಮೋದಿ, ‘ಮೊದಲಿನಂತೆಯೇ ಈ ವರ್ಷವೂ ನೀವು ತ್ರಿವರ್ಣದೊಂದಿಗೆ ನಿಮ್ಮ ಸೆಲ್ಫಿಯನ್ನು ''''''''harghartiranga.com'''''''' ನಲ್ಲಿ ಅಪ್‌ಲೋಡ್ ಮಾಡಬೇಕು ಮತ್ತು ನಾನು ನಿಮಗೆ ಇನ್ನೂ ಹೆಚ್ಚಿನದನ್ನು ನೆನಪಿಸಲು ಬಯಸುತ್ತೇನೆ. ಪ್ರತಿ ವರ್ಷ ಆಗಸ್ಟ್ 15 ರ ಮೊದಲು, ನೀವು ನನಗೆ ಬಹಳಷ್ಟು ಸಲಹೆಗಳನ್ನು ಕಳುಹಿಸುತ್ತೀರಿ. ಈ ವರ್ಷವೂ ನಿಮ್ಮ ಸಲಹೆಗಳನ್ನು ನನಗೆ ಕಳುಹಿಸಬೇಕು. ನೀವು MyGov ಅಥವಾ NaMo ಅಪ್ಲಿಕೇಶನ್‌ನಲ್ಲಿ ನಿಮ್ಮ ಸಲಹೆಗಳನ್ನು ಸಹ ಕಳುಹಿಸಬಹುದು. ನಾನು 15ನೇ ಆಗಸ್ಟ್ ಭಾಷಣದಲ್ಲಿ ಸಾಧ್ಯವಾದಷ್ಟು ಸಲಹೆಗಳನ್ನು ಕವರ್ ಮಾಡಲು ಪ್ರಯತ್ನಿಸುತ್ತೇನೆ’ ಎಂದರು.
ಮೊಯ್ಡಮ್ಸ್ ನಮ್ಮ ಹೆಮ್ಮೆ:
ಅಸ್ಸಾಂನ ‘ಮೊಯ್ಡಮ್ಸ್’ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಆ ಜಾಗದ ಮಹತ್ವವನ್ನು ವಿವರಿಸಿದರು. ಚರೈಡಿಯೋ ಅಹೋಮ್ ರಾಜ ಮನೆತನದ ಮೊದಲ ರಾಜಧಾನಿಯಾಗಿದ್ದು, ಇಲ್ಲಿನ ಜನ ತಮ್ಮ ಪೂರ್ವಜನ ಅವಶೇಷಗಳು ಮತ್ತು ಅಮೂಲ್ಯ ವಸ್ತುಗಳನ್ನು ಮೊಯ್ಡಮ್ಸ್‌ನ ದಿಬ್ಬ ಸಮಾಧಿಗಳಲ್ಲಿ ಇಡುತ್ತಿದ್ದರು ಎಂದರು.
ಕಲೆಯನ್ನು ಪ್ರೋತ್ಸಾಹಿಸುವ ‘ಪರಿ’:
ತನ್ನ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿದ್ದಾಗ ಮಾತ್ರ ದೇಶ ಪ್ರಗತಿಯಾಗಲು ಸಾಧ್ಯ ಎಂದ ಮೋದಿ, ಉದಯೋನ್ಮುಖ ಕಲಾವಿದರನ್ನು ಒಂದೇ ವೇದಿಕೆಗೆ ತಂದು ಕಲೆಯನ್ನು ಜನಪ್ರಿಯಗೊಳಿಸಲು ಪರಿ (ಪಬ್ಲಿಕ್ ಆರ್ಟ್ ಆಫ್ ಇಂಡಿಯಾ) ಯೋಜನೆ ಸಹಕಾರಿ ಎಂದರು. ರಸ್ತೆ ಬದಿಗಳಲ್ಲಿ ಮತ್ತು ಗೋಡೆಗಳ ಮೇಲೆ ಕಾಣಬಹುದಾದ ಚಿತ್ರಕಲೆಗಳನ್ನು ಪರಿಯೊಂದಿಗೆ ಕೈಜೋಡಿಸಿದ ಕಲಾವಿದರೇ ರಚಿಸಿರುವುದು ಎಂದು ಹೇಳಿದರು.
ಅಂತರಾಷ್ಟ್ರೀಯ ಹುಲಿ ದಿನ:
ಜು.29ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಹುಲಿ ದಿನದ ಬಗ್ಗೆ ಮಾತನಾಡಿದ ಮೋದಿ, ವ್ಯಾಘ್ರಗಳು ನಮ್ಮ ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಕಾಡಿನ ಸುತ್ತ ವಾಸಿಸುವ ಜನ ಅವುಗಳೊಂದಿಗೆ ಸಹಬಾಳ್ವೆ ನಡೆಸುವುದನ್ನು ಅರಿತಿದ್ದಾರೆ ಎಂದರು.
ಹುಲಿ ಮತ್ತು ಮಾನವನ ನಡುವೆ ಸಂಘರ್ಷ ಏರ್ಪಟ್ಟಲ್ಲಿ ಹುಲಿಗಳನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದ್ದು, ‘ಕುಲ್ಹಾಡಿ ಬಂದ್ ಪಂಚಾಯತ್’ ಇದರ ಭಾಗವಾಗಿದೆ. ಹುಲಿಗಳ ವಾಸಕ್ಕೆ ಯೋಗ್ಯ ವಾತಾವರಣ ಕಲ್ಪಿಸುವ ಸಲುವಾಗಿ ಕಾಡನ್ನು ಕಡಿಯದೇ ಇರಲು ನಿರ್ಧರಿಸಿ ರಾಜಸ್ಥಾನದ ರಣತಂಬೋರಿನಲ್ಲಿ ಈ ಆಭಿಯಾನವನ್ನು ಆರಂಬಿಸಲಾಯಿತು. ಇಂತಹ ಪ್ರಯತ್ನಗಳಿಂದಲೇ ದೇಶದಲ್ಲಿ ಹುಲಿಗಳ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಿದ್ದು, ವಿಶ್ವದ ಹುಲಿಗಳ ಪೈಲಿ ಶೇ.70ರಷ್ಟು ಭಾರತದಲ್ಲಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಒಲಂಪಿಕ್ಸ್‌ನಲ್ಲಿ ತಿರಂಗಾ:
‘ಪ್ರಸ್ತುತ ಇಡೀ ವಿಶ್ವದ ಕಣ್ಣು ಪ್ಯಾರಿಸ್ ಒಲಂಪಿಕ್ಸ್ ಮೇಲೆ ನೆಟ್ಟಿದೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ತಿರಂಗಾ ಹಾರಿಸಲು ಇದು ಒಳ್ಳೆ ಅವಕಾಶವಾಗಿದ್ದು, ದೇಶಕ್ಕಾಗಿ ಏನನ್ನಾದರೂ ಮಾಡಲು ಅವಕಾಶ ಕಲ್ಪಿಸುತ್ತದೆ. ನಮ್ಮ ಆಟಗಾರನ್ನು ಪ್ರೋತ್ಸಾಹಿಸೋಣ’ ಎಂದು ಮೋದಿ ಒಲಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ಶುಭ ಕೋರಿದರು.