ಸಾರಾಂಶ
ಲಖನೌ: ದೆಹಲಿಯಿಂದ ಉತ್ತರಪ್ರದೇಶದ ಲಖನೌಗೆ ಪ್ಯಾಸೆಂಜರ್ ರೈಲು ತೆರಳುವ ಮಾರ್ಗದಲ್ಲಿ ಹಳಿ ಮೇಲೆ 2 ಅಡಿ ಉದ್ದ, 6 ಕೇಜಿ ತೂಕದ ಮರದ ತುಂಡಿಟ್ಟು, ರೈಲಿನ ಹಳಿ ತಪ್ಪಿಸುವ ದುಷ್ಕೃತ್ಯವೊಂದು ಶನಿವಾರ ನಡೆದಿದೆ.
ಅದೃಷ್ಟವಶಾತ್ ರೈಲು ಮರದ ತುಂಡಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಲೋಕೋ ಪೈಲಟ್ ರೈಲು ನಿಲ್ಲಿಸಿದ್ದಾರೆ. ಹೀಗಾಗಿ ಸಂಭವನೀಯ ಅಪಾಯ ತಪ್ಪಿದೆ. ಮಲಿಹಾಬಾದ್ ಮತ್ತು ಕಾಕೋರಿ ನಿಲ್ದಾಣಗಳ ನಡುವೆ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಳೆದ ಭಾನುವಾರ ಕರ್ನಾಟಕದ ಉಳ್ಳಾಲದಲ್ಲಿಯೂ ರೈಲು ಹಳಿಗಳ ಮೇಲೆ ಕಿಡಿಗೇಡಿಗಳು ಜಲ್ಲಿ ಮತ್ತು ಕಲ್ಲುಗಳನ್ನು ಹಾಕಿದ್ದ ಘಟನೆ ಬೆಳಕಿಗೆ ಬಂದಿತ್ತು.
ಅಸಮರ್ಪಕ ಬೋಗಿ ಜೋಡಣೆ: 2 ಭಾಗವಾದ ಗೂಡ್ಸ್ ರೈಲು
ಭೋಪಾಲ್: ಬೋಗಿಯನ್ನು ಸರಿಯಾಗಿ ಜೋಡಿಸದ ಪರಿಣಾಮ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು ಸಂಪರ್ಕ ಕಡಿದುಕೊಂಡು ಎರಡು ಭಾಗವಾದ ಘಟನೆ ಮಧ್ಯಪ್ರದೇಶದ ಪಶ್ಚಿಮ ಸೆಂಟ್ರಲ್ ರೈಲ್ವೇಯ ಜಬಲ್‌ಪುರ ವಿಭಾಗದಲ್ಲಿ ಶನಿವಾರ ನಡೆದಿದೆ.ಕಪ್ಲಿಂಗ್ ಎಂಬುದು ರೈಲಿನ 2 ಬೋಗಿಗಳನ್ನು ಜೋಡಿಸಲು ಸರಪಳಿ ಮತ್ತು ಹುಕ್ ಹಾಕುವ ವಿಧಾನವಾಗಿದೆ. ಈ ರೈಲು ಸಿಂಗೌಲಿಯಿಂದ ಕಲ್ಲಿದ್ದಲು ತುಂಬಿಕೊಂಡು ಆಗ್ರಾಕ್ಕೆ ಹೊರಟಿತ್ತು. ಆಗ ಕಟ್ನಿ ಹಾಗೂ ಬಿನ ಸ್ಟೇಷನ್ ನಡುವೆ ಕಪ್ಲಿಂಗ್ ಕಳಚಿದೆ.
ಕಪ್ಲಿಂಗ್ ಮುರಿದ ಬಳಿಕ ಇಂಜಿನ್ ಮತ್ತು ಕೆಲವು ಬೋಗಿಗಳು 100 ಮೀಟರ್‌ಗಿಂತಲೂ ಹೆಚ್ಚು ಚಲಿಸಿದ್ದವು. ನಿರ್ವಾಹಕರು ವಾಕಿಟಾಕಿ ಮೂಲಕ ಚಾಲಕನನ್ನು ಸಂಪರ್ಕಿಸಿದ ಬಳಿಕ ರೈಲನ್ನು ನಿಲ್ಲಿಸಲಾಯಿತು.ಸಮಸ್ಯೆ ಬಗೆಹರಿಸಲಾಗಿದ್ದು, ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ರೈಲು ಆಗ್ರಕ್ಕೆ ಹೊರಟಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷಿತ್ ಶ್ರೀವತ್ಸವ ಹೇಳಿದ್ದಾರೆ.