ಲೋಕಾಯುಕ್ತರ ನೇಮಕಕ್ಕೆ ಶೀಘ್ರ ವಿಸ್ತೃತ ಮಾರ್ಗಸೂಚಿ: ಸುಪ್ರೀಂ ಕೋರ್ಟ್

| Published : Mar 23 2024, 01:05 AM IST / Updated: Mar 23 2024, 08:51 AM IST

ಲೋಕಾಯುಕ್ತರ ನೇಮಕಕ್ಕೆ ಶೀಘ್ರ ವಿಸ್ತೃತ ಮಾರ್ಗಸೂಚಿ: ಸುಪ್ರೀಂ ಕೋರ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಭ್ರಷ್ಟಾಚಾರವನ್ನು ನಿಗ್ರಹ ಮಾಡುವ ಮೂಲ ಉದ್ದೇಶದೊಂದಿಗೆ ಸ್ಥಾಪನೆಯಾಗಿರುವ ಲೋಕಾಯುಕ್ತರ ನೇಮಕ ಪ್ರಕ್ರಿಯೆಗೆ ವಿಸ್ತೃತ ಮಾರ್ಗಸೂಚಿ ರೂಪಿಸಬೇಕಾದ ಅಗತ್ಯವಿದ್ದು, ಸ್ವತಃ ತಾನೇ ರೂಪಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.

ನವದೆಹಲಿ: ಭ್ರಷ್ಟಾಚಾರವನ್ನು ನಿಗ್ರಹ ಮಾಡುವ ಮೂಲ ಉದ್ದೇಶದೊಂದಿಗೆ ಸ್ಥಾಪನೆಯಾಗಿರುವ ಲೋಕಾಯುಕ್ತರ ನೇಮಕ ಪ್ರಕ್ರಿಯೆಗೆ ವಿಸ್ತೃತ ಮಾರ್ಗಸೂಚಿ ರೂಪಿಸಬೇಕಾದ ಅಗತ್ಯವಿದ್ದು, ಸ್ವತಃ ತಾನೇ ರೂಪಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ. 

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯ ನ್ಯಾ ಚಂದ್ರಚೂಡ್‌ ನೇತೃತ್ವದ ಪೀಠ, ‘ಲೋಕಾಯುಕ್ತರ ನೇಮಕದಲ್ಲಿ ಲೋಪ ಆಗುತ್ತಿರುವುದು ರಾಷ್ಟ್ರವ್ಯಾಪಿ ಸಮಸ್ಯೆಯಾಗಿದೆ. 

ಈ ಹಿನ್ನೆಲೆಯಲ್ಲಿ ಲೋಕಾಯುಕ್ತರನ್ನು ನೇಮಿಸುವಾಗ ಆ ಸಮಿತಿಯಲ್ಲಿ ಇರುವ ಸದಸ್ಯರು, ಅವರಿಗೆ ನೀಡುವ ಮಾಹಿತಿ, ಅವಧಿ, ಸಲಹೆ ನೀಡುವ ಅಧಿಕಾರ, ಚರ್ಚಾ ಪ್ರಕ್ರಿಯೆ ಮುಂತಾದವುಗಳ ಕುರಿತು ವಿಸ್ತೃತವಾಗಿ ಮಾರ್ಗಸೂಚಿ ರೂಪಿಸಲಾಗುವುದು’ ಎಂದು ತಿಳಿಸಿದೆ. 

ಏನಿದು ಪ್ರಕರಣ?
ಮಧ್ಯಪ್ರದೇಶದಲ್ಲಿ ಲೋಕಾಯುಕ್ತರಾಗಿ ನಿವೃತ್ತ ನ್ಯಾ ಸತ್ಯೇಂದ್ರ ಕುಮಾರ್‌ ಜೈನ್ ಅವರನ್ನು ನೇಮಿಸುವಾಗ ಸರ್ಕಾರ ತಮ್ಮ ಸಲಹೆಯನ್ನು ಸ್ವೀಕರಿಸಿರಲಿಲ್ಲ ಎಂಬುದಾಗಿ ಅಲ್ಲಿನ ಪ್ರತಿಪಕ್ಷ ನಾಯಕ ಉಮಂಗ್‌ ಸಿಂಘರ್‌ ಖ್ಯಾತ ವಕೀಲ ಕಪಿಲ್‌ ಸಿಬಲ್‌ ಮೂಲಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 

ಆದರೆ ಸರ್ಕಾರದ ಪರವಾಗಿ ವಾದಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಈ ಕುರಿತಾಗಿ ರಾಜ್ಯದ ಮುಖ್ಯ ನ್ಯಾಯಾಧೀಶ ಮತ್ತು ಮುಖ್ಯಮಂತ್ರಿಯ ಸಲಹೆ ಪಡೆಯಲಾಗಿದೆ ಎಂದು ವಾದಿಸಿದ್ದರು. 

ಆದರೆ ನ್ಯಾಯಾಲಯ ಪ್ರತಿಪಕ್ಷ ನಾಯಕರ ಸಲಹೆಯನ್ನು ತೋರಿಕೆಗಾಗಿ ಮಾತ್ರ ಸ್ವೀಕರಿಸಲಾಗಿದೆ ಮತ್ತು ಅವರಿಗೆ ಆಯ್ಕೆಯನ್ನೇ ನೀಡಿರಲಿಲ್ಲ ಎಂಬುದನ್ನು ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದೆ. 

ಆಯ್ಕೆ ಪ್ರಕ್ರಿಯೆ ಏನು?
ಲೋಕಾಯುಕ್ತರನ್ನು ನೇಮಿಸುವಾಗ ಮುಖ್ಯಮಂತ್ರಿ, ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಮತ್ತು ಪ್ರತಿಪಕ್ಷ ನಾಯಕರ ಸಲಹೆಯನ್ನು ಆಧರಿಸಿ ಒಮ್ಮತ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ಆಯ್ಕೆ ಮಾಡಬೇಕು ಎಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. 

ಆದರೆ ಪ್ರಸ್ತುತ ಲೋಕಾಯುಕ್ತರನ್ನು ನೇಮಿಸುವಾಗ ಸರ್ಕಾರಗಳು ಮುಂಚೆಯೇ ವ್ಯಕ್ತಿಯನ್ನು ಆಯ್ಕೆ ಮಾಡಿ ನಿಮಿತ್ತ ಮಾತ್ರಕ್ಕೆ ಪ್ರತಿಪಕ್ಷ ನಾಯಕರೊಂದಿಗೆ ಸಭೆ ಸೇರಿ ಅವರನ್ನು ಆರಿಸುವ ಪ್ರಕ್ರಿಯೆ ರೂಢಿಸಿಕೊಂಡಿವೆ ಎಂಬ ಆರೋಪವಿದೆ.