ಇಸ್ರೋದ ಪಿಎಸ್‌ಎಲ್‌ವಿ-ಸಿ62 ರಾಕೆಟ್‌, ಸೋಮವಾರ 3ನೇ ಹಂತದಲ್ಲಿ ಉಡಾವಣಾ ವೈಫಲ್ಯ ಅನುಭವಿಸಿ ಅದರಲ್ಲಿದ್ದ ಎಲ್ಲ 16 ಉಪಗ್ರಹಗಳು ನಾಪತ್ತೆ ಆಗಿದ್ದವು. ಆದರೆ ಇದರ ನಡುವೆ ಸ್ಪಾನಿಷ್‌ ಉಪಗ್ರಹವೊಂದು ಜೀವಂತವಾಗಿದೆ ಹಾಗೂ ನಿರ್ಣಾಯಕ ಡೇಟಾವನ್ನು ಭೂಮಿಗೆ ರವಾನಿಸಿದೆ.

 ಶ್ರೀಹರಿಕೋಟ : ಇಸ್ರೋದ ಪಿಎಸ್‌ಎಲ್‌ವಿ-ಸಿ62 ರಾಕೆಟ್‌, ಸೋಮವಾರ 3ನೇ ಹಂತದಲ್ಲಿ ಉಡಾವಣಾ ವೈಫಲ್ಯ ಅನುಭವಿಸಿ ಅದರಲ್ಲಿದ್ದ ಎಲ್ಲ 16 ಉಪಗ್ರಹಗಳು ನಾಪತ್ತೆ ಆಗಿದ್ದವು. ಅವುಗಳು ಆಗಸದಲ್ಲೇ ದಹನ ಆಗಿರಬಹುದು ಎಂಬ ಶಂಕೆ ಇತ್ತು. ಆದರೆ ಇದರ ನಡುವೆ ಸ್ಪಾನಿಷ್‌ ಉಪಗ್ರಹವೊಂದು ಜೀವಂತವಾಗಿದೆ ಹಾಗೂ ನಿರ್ಣಾಯಕ ಡೇಟಾವನ್ನು ಭೂಮಿಗೆ ರವಾನಿಸಿದೆ.

ಈ ಬಗ್ಗೆ ಉಪಗ್ರಹ ಸಿದ್ಧಪಡಿಸಿ ಅದನ್ನು ಪಿಎಸ್‌ಎಲ್‌ವಿಯಲ್ಲಿ ಕಳಿಸಿದ್ದ, ಸ್ಪ್ಯಾನಿಷ್ ಸ್ಟಾರ್ಟ್ಅಪ್ ‘ಆರ್ಬಿಟಲ್ ಪ್ಯಾರಡೈಮ್’ ಟ್ವೀಟ್‌ ಮಾಡಿದೆ. ‘ನಮ್ಮ ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್ಸ್ಟ್ರೇಟರ್ (ಕಿಡ್‌)’ ಕ್ಯಾಪ್ಸೂಲ್ ಗಮನಾರ್ಹವಾಗಿ ಬದುಕುಳಿದಿದೆ’ ಎಂದು ಬಹಿರಂಗಪಡಿಸಿದೆ

‘ಪಿಎಸ್‌ಎಲ್‌ವಿ ಸಿ62ನಿಂದ ನಮ್ಮ ಉಪಗ್ರಹದ ಬೇರ್ಪಡುವಿಕೆ ಯಶಸ್ವಿಯಾಗಿದೆ ಹಾಗೂ ನಿರ್ಣಾಯಕ ಡೇಟಾವನ್ನು ಭೂಮಿಗೆ 3ನಿಮಿಷ ಕಾಲ ರವಾನಿಸಿದೆ’ ಎಂದು ಕಂಪನಿ ಹೇಳಿದೆ.

ಇಸ್ರೋ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತ್ತು

ಪಿಎಸ್‌ಎಲ್‌ವಿ ವಾಹಕ 3ನೇ ಹಂತಕ್ಕೆ ಹೋದಾಗ ಇಸ್ರೋ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತ್ತು. ಆಗ ಅದರಲ್ಲಿದ್ದ ಬೆಂಗಳೂರಿನ ದಯಾನಂದ ಸಾಗರ್‌ ವಿವಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಉಪಗ್ರಹ ಸೇರಿ ಎಲ್ಲ 16 ಉಪಗ್ರಹಗಳು ನಾಪತ್ತೆ ಆಗಿದ್ದವು. ಆದರೆ, ಆ ಕ್ಲಿಷ್ಟಕರ 3ನೇ ಹಂತ ದಾಟಿರುವ 25 ಕೆಜಿ ಫುಟ್‌ಬಾಲ್ ಗಾತ್ರದ ಸ್ಪೇನ್‌ ಉಪಗ್ರಹ 4ನೇ ಹಂತಕ್ಕೆ ತಲುಪಿ ಯಶಸ್ವಿಯಾಗಿ ಕಕ್ಷೆ ಸೇರಿದೆ.

ಉಳಿದ 15 ಏನಾದವು?:

ಉಳಿದ 15 ಉಪಗ್ರಹಗಳು ಏನಾದವು ಎಂಬ ಮಾಹಿತಿ ಅಧಿಕೃತವಾಗಿ ಲಭ್ಯವಿಲ್ಲ. ಆದರೆ ಬಾಕಿ ಉಪಗ್ರಹಗಳು ಆಗಸದಲ್ಲೇ ಭಸ್ಮವಾಗಿರುವ ಶಂಕೆಯನ್ನು ಇಸ್ರೋ ಮಾಜಿ ವಿಜ್ಞಾನಿ ಮನೀಶ್‌ ಪುರೋಹಿತ್‌ ವ್ಯಕ್ತಪಡಿಸಿದ್ದಾರೆ.