ಪಶ್ಚಿಮ ಬಂಗಾಳ ಡಿಜಿಪಿ, 6 ಗೃಹ ಕಾರ್ಯದರ್ಶಿಗಳ ಎತ್ತಂಗಡಿ

| Published : Mar 19 2024, 12:46 AM IST

ಸಾರಾಂಶ

ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಹಿಂಸಾಪೀಡಿತ ಪ.ಬಂಗಾಳದ ಡಿಜಿಪಿ ಹಾಗೂ 6 ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಚುನಾವಣಾ ಆಯೋಗ ಎತ್ತಂಗಡಿ ಮಾಡಿದೆ.

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಹಿಂಸಾಪೀಡಿತ ಪ.ಬಂಗಾಳದ ಡಿಜಿಪಿ ಹಾಗೂ 6 ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಚುನಾವಣಾ ಆಯೋಗ ಎತ್ತಂಗಡಿ ಮಾಡಿದೆ.

ಸಂದೇಶ್‌ಖಾಲಿ ಹಿಂಸೆಯಿಂದ ಸುದ್ದಿಯಲ್ಲಿರುವ ಪ.ಬಂಗಾಳದ ಡಿಜಿಪಿ ರಾಜೀವ್‌ ಕುಮಾರ್‌ ಅವರನ್ನು ವರ್ಗಾಯಿಸಿರುವ ಆಯೋಗ, ಅವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ವಿವೇಕ್‌ ಸಹಾಯ್‌ರನ್ನು ನೇಮಿಸಿದೆ. ಅಲ್ಲದೆ, ಗುಜರಾತ್‌, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಗೃಹ ಕಾರ್ಯದರ್ಶಿಗಳನ್ನೂ ಸಹ ವರ್ಗಾಯಿಸಿದೆ.

ಇದಲ್ಲದೆ, ಬೃಹನ್ಮುಂಬಯಿ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು ಮತ್ತು ಉಪ ಆಯುಕ್ತರು ಸೋಮವಾರ ಸಂಜೆ 6 ಗಂಟೆ ಒಳಗೆ ಹುದ್ದೆ ಬಿಡಬೇಕು ಎಂದು ಸೂಚಿಸಿದೆ.

ಏಕೆ ತೆರವು?:

ನೀತಿ ಸಂಹಿತೆ ಜಾರಿಯಾದ ಬಳಿಕ ಚುನಾವಣಾ ಆಯೋಗಕ್ಕೆ ಅಧಿಕಾರಿಗಳನ್ನು ವರ್ಗಾಯಿಸುವ ಪರಮೋಚ್ಚ ಅಧಿಕಾರವಿರುತ್ತದೆ. ಈ ವೇಳೆ, ಆಯೋಗವು ಆಯಾ ರಾಜ್ಯ ಸರ್ಕಾರಗಳಿಗೆ ಹೆಚ್ಚು ನಿಷ್ಠೆ ಹೊಂದಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ನಿಷ್ಪಕ್ಷಪಾತ ಅಧಿಕಾರಿಗಳನ್ನು ನೇಮಿಸುವುದು ಮಾಮೂಲಿ ಕ್ರಮ.