2ನೇ ಹಂತದ ಚುನಾವಣೆ ಶಾಂತಿಯುತ: ಶೇ.62ರಷ್ಟು ಮತ

| Published : Apr 27 2024, 01:30 AM IST / Updated: Apr 27 2024, 05:07 AM IST

ಸಾರಾಂಶ

ದೇಶದ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ 2ನೇ ಹಂತದ ಚುನಾವಣೆ ಶಾಂತಿಯುತವಾಗಿ ನೆರವೇರಿದೆ. ಅಲ್ಲಲ್ಲಿ ಇವಿಎಂಗಳ ತಾಂತ್ರಿಕ ತೊಂದರೆ, ನಕಲಿ ಮತದಾನದ ಯತ್ನಗಳು ನಡೆದಿದ್ದು ಹೊರತುಪಡಿಸಿದರೆ ಉಳಿದಂತೆ ಮತದಾನ ಪೂರ್ಣ ಶಾಂತಿಯುತವಾಗಿತ್ತು.

ನವದೆಹಲಿ: ದೇಶದ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ 2ನೇ ಹಂತದ ಚುನಾವಣೆ ಶಾಂತಿಯುತವಾಗಿ ನೆರವೇರಿದೆ. ಅಲ್ಲಲ್ಲಿ ಇವಿಎಂಗಳ ತಾಂತ್ರಿಕ ತೊಂದರೆ, ನಕಲಿ ಮತದಾನದ ಯತ್ನಗಳು ನಡೆದಿದ್ದು ಹೊರತುಪಡಿಸಿದರೆ ಉಳಿದಂತೆ ಮತದಾನ ಪೂರ್ಣ ಶಾಂತಿಯುತವಾಗಿತ್ತು.

 ಏ.19ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.65ರಷ್ಟು ಮತ ಚಲಾವಣೆಯಾಗಿದ್ದರೆ ಶುಕ್ರವಾರ ಶೇ.60ರಷ್ಟು ಮತ ಚಲಾವಣೆಯಾಗಿದೆ.ಇದರೊಂದಿಗೆ 2 ಹಂತದಲ್ಲಿ 200 ಸ್ಥಾನಗಳಿಗೆ ಚುನಾವಣೆ ಮುಕ್ತಾಯವಾಗಿದ್ದು, ಉಳಿದ 5 ಹಂತದಲ್ಲಿ ಇನ್ನುಳಿದ 343 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಮೇ 7ರಂದು 13 ರಾಜ್ಯಗಳ 94 ಸ್ಥಾನಗಳಿಗೆ 3ನೇ ಹಂತದ ಚುನಾವಣೆ ನಡೆಯಲಿದೆ.

ಪ್ರಮುಖರ ಭವಿಷ್ಯ ಇವಿಎಂನೊಳಗೆ:2ನೇ ಹಂತದ ಚುನಾವಣೆಯಲ್ಲಿ ರಾಹುಲ್‌ ಗಾಂಧಿ, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಶಶಿ ತರೂರ್‌, ನಟಿ ಹೇಮಾಮಾಲಿನಿ, ಟೀವಿ ರಾಮಾಯಣದ ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌, ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ, ಕೆ.ಸಿ.ವೇಣುಗೋಪಾಲ್‌, ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಸೇರಿದಂತೆ 1206 ಅಭ್ಯರ್ಥಿಗಳು 88 ಸ್ಥಾನಕ್ಕೆ ಸ್ಪರ್ಧಿಸಿದ್ದು ಇವರೆಲ್ಲರ ಮತಗಳು ಇದೀಗ ಎಲೆಕ್ಟ್ರಾನಿಕ್‌ ಮತಯಂತ್ರದಲ್ಲಿ ಭದ್ರವಾಗಿ ಸೇರಿಕೊಂಡಿದೆ. ಜೂ.4ರಂದು ಇವರೆಲ್ಲರ ಫಲಿತಾಂಶ ಪ್ರಕಟವಾಗಲಿದೆ.ಕೇರಳದ ಎಲ್ಲ 20 ಸ್ಥಾನಗಳಿಗೂ ಶುಕ್ರವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಿತು. ತ್ರಿಪುರಾದಲ್ಲಿ ಅತಿಹೆಚ್ಚು ಮತ್ತು ಉತ್ತರಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮತ ಚಲಾವಣೆಯಾಗಿದೆ.

ಅಲ್ಲಲ್ಲಿ ಅಹಿತಕರ ಘಟನೆ:ಕೇರಳದ ಆಲಪ್ಪುಳ, ಪಾಲಕ್ಕಾಡ್‌, ಮಲಪ್ಪುರಂನಲ್ಲಿ ಓರ್ವ ಮತದಾರರು ಮತದಾನದ ಬಳಿಕ ವಯೋಸಹಜ ಸಮಸ್ಯೆಗಳ ಕಾರಣದಿಂದ ನಿಧನರಾದರು. ಇನ್ನು ಮಧ್ಯಪ್ರದೇಶದ ಮೂಲದ ಸಶಸ್ತ್ರ ಪಡೆಯ ಯೋಧನೊಬ್ಬ ಛತ್ತೀಸ್‌ಗಢದ ಮಹಾಸಮುಂದ್‌ ಲೋಕಸಭಾ ಕ್ಷೇತ್ರದ ಮತಗಟ್ಟೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆಯೂ ನಡೆದಿದೆ. ಛತ್ತೀಸ್‌ಗಢಧ ಕಂಕೇರ್‌ ಲೋಕಸಭಾ ಕ್ಷೇತ್ರದ ಸಿವ್ನಿ ಗ್ರಾಮದ ಮತಗಟ್ಟೆಯನ್ನು ಮದುವೆ ಮಂಟಪದಂತೆ ಸಜ್ಜುಗೊಳಿಸಿದ್ದು ಎಲ್ಲರ ಗಮನ ಸೆಳೆಯಿತು.ಶುಕ್ರವಾರದ ಚುನಾವಣೆಯಲ್ಲಿ 16 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸಿದ್ದು, ಮತದಾನಕ್ಕಾಗಿ ಒಟ್ಟು 1.67 ಲಕ್ಷ ಮತಗಟ್ಟೆ ಸ್ಥಾಪಿಸಲಾಗಿತ್ತು. ಮತದಾನಕ್ಕೆ ಅರ್ಹತೆ ಪಡೆದಿದ್ದ 15.88 ಕೋಟಿ ಮತದಾರರು ಪೈಕಿ ಶೇ.60ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. 2ನೇ ಹಂತದ ಚುನಾವಣಾ ಕಾರ್ಯಗಳಿಗಾಗಿ 4 ವಿಶೇಷ ರೈಲು, 80000 ವಾಹನಗಳು ಮತ್ತು 3 ಹೆಲಿಕಾಪ್ಟರ್‌ಗಳನ್ನು ಚುನಾವಣಾ ಆಯೋಗ ಬಳಸಿಕೊಂಡಿತ್ತು.

ಎಲ್ಲೆಲ್ಲಿ ಚುನಾವಣೆ?

ಕೇರಳ 20, ಕರ್ನಾಟಕ 14, ರಾಜಸ್ಥಾನ 13, ಮಹಾರಾಷ್ಟ್ರ 8, ಉತ್ತರಪ್ರದೇಶ 8, ಮಧ್ಯಪ್ರದೇಶ 7, ಅಸ್ಸಾಂ 5, ಬಿಹಾರ 5, ಛತ್ತೀಸ್‌ಗಢ 3, ಪಶ್ಚಿಮ ಬಂಗಾಳ 3, ಮಣಿಪುರ 1, ತ್ರಿಪುರಾ 1, ಜಮ್ಮು ಮತ್ತು ಕಾಶ್ಮೀರ 1. 2019ರಲ್ಲಿ ಈ 88 ಕ್ಷೇತ್ರಗಳ ಪೈಕಿ ಬಿಜೆಪಿ 56ರಲ್ಲಿ ಕಾಂಗ್ರೆಸ್‌ 18ರಲ್ಲಿ ಗೆಲುವು ಸಾಧಿಸಿತ್ತು.

2ನೇ ಹಂತದ ಚುನಾವಣೆಮತದಾನ

2014% 69.622019% 69.452024% 62.00

ಮೊದಲ ಹಂತಶೇ.68.292ನೇ ಹಂತಶೇ.62