ಸಾರಾಂಶ
ಲಖನೌ : ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸೋಮವಾರ ತಮ್ಮ ತವರೂರು ಲಖನೌಗೆ ಭೇಟಿ ನೀಡಲಿದ್ದು, ಸ್ವಾಗತಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ವಿಮಾನ ನಿಲ್ದಾಣದಿಂದ ಶುಕ್ಲಾ ರೋಡ್‌ಶೋ ಹಮ್ಮಿಕೊಳ್ಳಲಾಗಿದೆ.
ಶುಕ್ಲಾ ಓದಿದ ಸಿಟಿ ಮಾಂಟೆಸೆರಿ ಶಾಲೆಯ 63,000 ಮಕ್ಕಳು ಬೆಳಗ್ಗೆ 8.45ಕ್ಕೆ ಏರ್ಪೋರ್ಟ್‌ನಿಂದ ಜಿ20 ಚೌಕ್‌ವರೆಗೆ ಶುಕ್ಲಾ ಜತೆ ವಿಜಯಯಾತ್ರೆ ನಡೆಸಲಿದ್ದಾರೆ. ಬಳಿಕ ಶುಕ್ಲಾ ಶಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಮನೆಗೆ ಪ್ರಯಾಣಿಸಲಿದ್ದಾರೆ. ಅವರು ಆಗಮಿಸುವ ಮಾರ್ಗದ ತುಂಬೆಲ್ಲಾ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಮನೆಯಲ್ಲಿ ಮೆಚ್ಚಿನ ತಿನಿಸು ಸಿದ್ಧವಾಗುತ್ತಿವೆ.
ಶುಕ್ಲಾ ಅವರ ತಂದೆ ಮಾತನಾಡಿ, ‘ಶುಭಾಂಶು ಅವರಿಗೆ ಇಷ್ಟವಿರುವ ತಿಂಡಿ ತಿನಿಸುಗಳನ್ನು ತಯಾರಿಸಲಾಗುತ್ತಿದೆ. ಕುಟುಂಬವೆಲ್ಲಾ ಬರುತ್ತಿದೆ. ಶುಭಾಂಶು 3 ದಿನ ಮನೆಯಲ್ಲಿರಲಿದ್ದಾರೆ’ ಎಂದರು.
ಮತ್ತೊಂದೆಡೆ ರಾಷ್ಟ್ರೀಯ ಲೋಕದಳ ಕಾರ್ಯದರ್ಶಿ ಅಂಕುರ್ ಸಕ್ಸೇನಾ ಅವರು ಇಂದಿರಾಗಾಂಧಿ ತಾರಾಲಯ ಮತ್ತು ಪ್ರಾದೇಶಿಕ ಸೈನ್ಸ್ ಸಿಟಿಗೆ ಶುಭಾಂಶು ಶುಕ್ಲಾ ಹೆಸರಿಡಬೇಕು ಎಂದು ಮನವಿ ಮಾಡಿದ್ದಾರೆ.