ಸಾರಾಂಶ
ಸೆಬಿ ಮುಖ್ಯಸ್ಥೆಯಾಗಿರುವಾಗ ಮಾಧವಿ ಬುಚ್ ಅವರು ಅಪ್ರಕಟಿತ ಖಾಸಗಿ ಕಂಪನಿ ಷೇರುಗಳ ದರದ ಕುರಿತ ವರದಿಯನ್ನು ತಮ್ಮಲ್ಲಿ ಇರಿಸಿಕೊಂಡು, ಷೇರು ಮಾರುಕಟ್ಟೆಯಲ್ಲಿ 36.9 ಕೋಟಿ ರು.ಗಳಷ್ಟು ವಹಿವಾಟು ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನವದೆಹಲಿ : ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಹಾಗೂ ಅವರ ಉದ್ಯಮಿ ಪತಿ ಧವಲ್ ಬುಚ್ ಅವರು ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿರುವ ಕಂಪನಿಗಳಲ್ಲಿ ಅಕ್ರಮವಾಗಿ ವ್ಯವಹಾರ ಹೊಂದಿದ್ದಾರೆ ಎಂದು ಅಮೆರಿಕದ ಹಿಂಡನ್‌ಬರ್ಗ್ ಸಂಶೋಧನಾ ಸಂಸ್ಥೆ ವರದಿ ಬಿಡುಗಡೆ ಮಾಡಿ ದೊಡ್ಡ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಇನ್ನೊಂದು ಗಂಭೀರ ಆರೋಪ ಮಾಡಿದೆ.
ಮಾಧವಿ ಬುಚ್ ಸೆಬಿ ಮುಖ್ಯಸ್ಥೆಯಾಗಿರುವಾಗ ಅಪ್ರಕಟಿತ ಖಾಸಗಿ ಕಂಪನಿ ಷೇರುಗಳ ದರದ ಕುರಿತ ವರದಿಯನ್ನು ತಮ್ಮಲ್ಲಿ ಇರಿಸಿಕೊಂಡು, ಷೇರು ಮಾರುಕಟ್ಟೆಯಲ್ಲಿ 36.9 ಕೋಟಿ ರು.ಗಳಷ್ಟು ವಹಿವಾಟು ನಡೆಸಿದ್ದಾರೆ. ಇದು ಕಾನೂನುಬಾಹಿರ. ಹಾಗೆಯೇ, ಅವರು ಭಾರತ-ಚೀನಾ ನಡುವೆ ಸಂಘರ್ಷ ನಡೆಯುತ್ತಿರುವಾಗ ಚೀನಾದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಆರೋಪಿಸಿದ್ದಾರೆ.
ಇದೇ ವೇಳೆ, ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ಬಿಡುಗಡೆ ಮಾಡಿದ್ದು, 2017ರಿಂದ 2023ರ ನಡುವೆ ಮಾಧವಿ ಬುಚ್ ಸೆಬಿಯ ಸದಸ್ಯೆ ಹಾಗೂ ಅಧ್ಯಕ್ಷೆಯಾಗಿದ್ದಾಗ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿರುವ ಕಂಪನಿಗಳಲ್ಲಿ ನಿಯಮಬಾಹಿರವಾಗಿ ನಡೆಸಿದ್ದಾರೆ ಎನ್ನಲಾದ 36.9 ಕೋಟಿ ರು.ಗಳ ವ್ಯವಹಾರದ ಪಟ್ಟಿ ನೀಡಿದ್ದಾರೆ.
ಬುಚ್ ದಂಪತಿಗಳ ಅಕ್ರಮ ವ್ಯವಹಾರ ಹಾಗೂ ಚೀನಾ ನಂಟು ಪ್ರಧಾನಿ ನರೇಂದ್ರ ಮೋದಿಯವರಿಗೆ ಗೊತ್ತಿದೆಯೇ ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.
ಹಿಂಡನ್‌ಬರ್ಗ್ ವರದಿ ಬಳಿಕ ‘ನಾವು ಯಾವುದೇ ತಪ್ಪು ಮಾಡಿಲ್ಲ’ ಎಂದು ಬುಚ್ ದಂಪತಿ ಶುಕ್ರವಾರವಷ್ಟೇ ಎರಡನೇ ಹೇಳಿಕೆ ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್ ಹೊಸ ಆರೋಪಗಳನ್ನು ಮಾಡಿದೆ.