ಬೆಳ್ಳುಳ್ಳಿ ಬೆಳೆದು ಕೋಟ್ಯಾಧಿಪತಿಗಳಾದ ರೈತರು

| Published : Feb 23 2024, 01:50 AM IST / Updated: Feb 23 2024, 08:36 AM IST

ಸಾರಾಂಶ

ಈರುಳ್ಳಿ ಬಳಿಕ ಬೆಳ್ಳುಳ್ಳಿಗೆ ಭರ್ಜರಿ ಬೆಲೆ ಬಂದ ಪರಿಣಾಮ ಮಧ್ಯಪ್ರದೇಶ ಹಲವು ರೈತರಿಗೆ ದಿಢೀರ್‌ ಶ್ರೀಮಂತಿಕೆ ಬಂದಿದ್ದು, ಕೆಲವರು ಕೋಟ್ಯಾಧಿಪತಿಗಳೂ ಆಗಿದ್ದಾರೆ.

ಚಿಂದ್ವಾರಾ: ಕೆಲ ತಿಂಗಳ ಹಿಂದೆ ಈರುಳ್ಳಿ ಬೆಲೆ ಕೆ.ಜಿಗೆ 200 ರು. ತಲುಪಿದ್ದ ಕಾರಣ ಕರ್ನಾಟಕ, ಮಹಾರಾಷ್ಟ್ರದ ಹಲವು ರೈತರು ದಿಢೀರ್‌ ಕೋಟ್ಯಧಿಪತಿಗಳಾಗಿದ್ದರು. 

ಇದೀಗ ಅಂಥದ್ದೇ ಅವಕಾಶ ಬೆಳ್ಳುಳ್ಳಿ ರೈತರನ್ನು ಹುಡುಕಿಕೊಂಡು ಬಂದಿದೆ. ಬೆಳ್ಳುಳ್ಳಿ ಬೆಲೆ ಕೆಜಿಗೆ 300-400 ರು. ತಲುಪಿದ ಬೆನ್ನಲ್ಲೇ ದೇಶದಲ್ಲೇ ಅತಿ ಹೆಚ್ಚು ಬೆಳ್ಳುಳ್ಳಿ ಬೆಳೆಯುವ ಮಧ್ಯಪ್ರದೇಶದಲ್ಲಿ ಹಲವು ರೈತರು ದಿಢೀರ್‌ ಕೋಟ್ಯಧಿಪತಿಗಳಾಗಿದ್ದಾರೆ.

ಸಾಮಾನ್ಯವಾಗಿ ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ 80-100 ರು.ವರೆಗೂ ಇರುತ್ತದೆ. ಆದರೆ ಈ ಬಾರಿ ಬೆಲೆ 300-400 ರು.ವರೆಗೂ ತಲುಪಿದ ಕಾರಣ ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.70ರಷ್ಟು ಪಾಲು ಹೊಂದಿರುವ ಮಧ್ಯಪ್ರದೇಶ ರೈತರು ಭರ್ಜರಿ ಖುಷಿಯಾಗಿದ್ದಾರೆ. 

ಸಾಕಷ್ಟು ಪ್ರಮಾಣದ ರೈತರಿಗೆ ಈ ಬೆಲೆ ಏರಿಕೆಯ ಲಾಭ ಸಿಕ್ಕಿದ್ದು, ಹಲವು ರೈತರು ಕೆಲವೇ ತಿಂಗಳಲ್ಲೇ ಕೋಟ್ಯಧಿಪತಿಗಳಾಗಿದ್ದಾರೆ.

ಚಿಂದ್ವಾರಾ ಬಳಿಯ ಬದ್ನೂರ್‌ನಲ್ಲಿರುವ ರಾಹುಲ್‌ ದೇಶ್‌ಮುಖ್‌ ತನ್ನ 13 ಎಕರೆ ಜಮೀನಿನ ಲ್ಲಿ 25 ಲಕ್ಷ ರು. ವೆಚ್ಚ ಮಾಡಿ ಬೆಳ್ಳುಳ್ಳಿ ಬೆಳೆ ಬೆಳೆದಿದ್ದ. 

ಇತ್ತೀಚೆಗೆ ಬೆಲೆಯು ಕೆಜಿಗೆ 300-400 ರು.ಗೆ ಏರಿರುವ ಪರಿಣಾಮ 1 ಕೋಟಿ ರು.ಗೂ ಅಧಿಕ ಲಾಭ ಗಳಿಸಿದ್ದಾನೆ. ಇನ್ನೂ ಕೊಯಲು ಬಾಕಿ ಇದ್ದು, ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿ ಇದ್ದಾನೆ. ಇಂಥದ್ದೇ ಯಶೋಗಾಥೆ ರಾಜ್ಯವು ಹಲವು ಕಡೆ ಕೇಳಿಬಂದಿದೆ.

ಬೆಲೆ ಏರಿಕೆ ಬೆನ್ನಲ್ಲೇ ಕಳ್ಳತನ ಪ್ರಕರಣಗಳೂ ಹೆಚ್ಚಾಗಿದ್ದು, ರೈತರು ಹೊಲಗಳಿಗೆ ಸಿಸಿಟೀವಿ ಅಳವಡಿಸಿ ಕಾವಲು ಕಾಯುತ್ತಿರುವ ದೃಶ್ಯಗಳು ಹಲವು ಕಡೆ ಕಂಡುಬಂದಿದೆ.