ಸಾರಾಂಶ
ಮಹಾಕುಂಭ ನಗರ: ಫೆ.3ರಂದು ಬಸಂತ ಪಂಚಮಿಯ ಪವಿತ್ರ ದಿನವಾಗಿದ್ದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಮತ್ತೊಂದು ಸುತ್ತಿನಲ್ಲಿ ಕೋಟ್ಯಂತರ ಜನರು ಹರಿದು ಬರುವ ನಿರೀಕ್ಷೆ ಇದೆ.
ಜ.29ರ ಮೌನಿ ಅಮಾವಾಸ್ಯೆಯಂದು ಕಾಲ್ತುಳಿತದಿಂದ 30 ಜನ ಮರಣಿಸಿದ ದುರ್ಘಟನೆ ಬಳಿಕ ರಾಜ್ಯ ಸರ್ಕಾರ ಭಾರೀ ಎಚ್ಚರಿಕೆ ಕೈಗೊಂಡಿದ್ದು, ಆಪರೇಷನ್ 11 ಹೆಸರಲ್ಲಿ ಹಲವು ಭದ್ರತಾ ಕ್ರಮಗಳನ್ನು ಕೈಗೊಂಡಿದೆ.ಆಪರೇಷನ್ 11:
‘ಆಪರೇಷನ್ 11’ ಅಡಿಯಲ್ಲಿ ಏಕಮುಖ ರಸ್ತೆ ಮಾರ್ಗದ ಕಟ್ಟುನಿಟ್ಟು ಜಾರಿ, ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಳ, ಶಾಸ್ತ್ರಿ ಸೇತುವೆಯಲ್ಲಿ ವಿಶೇಷ ನಿಗಾ, ಟಿಕರ್ಮಾಫಿ ತಿರುವಿನಲ್ಲಿ ಜನಸಂದಣಿ ನಿಯಂತ್ರಣ, ಫಾಫಮೌ ಮತ್ತು ಪಾಂಟೂನ್ ಸೇತುವೆಗಳಲ್ಲಿ ವಿಶೇಷ ವ್ಯವಸ್ಥೆ, ರೈಲು ನಿಲ್ದಾಣ ಮತ್ತು ಬಸ್ ಸಂಚಾರ ನಿಯಂತ್ರಣ, ಜುನ್ಸಿಯಲ್ಲಿ ವಿಶೇಷ ಬಸ್ ಕಾರ್ಯಾಚರಣೆ, ಪ್ರಯಾಗ್ ಜಂಕ್ಷನ್‌ನಲ್ಲಿ ಭದ್ರತೆ ಹೆಚ್ಚಳ, ಜಿಟಿ ಜವಾಹರ್ ಮತ್ತು ಹರ್ಷವರ್ಧನ್ ಚೌರಾಹದಲ್ಲಿ ಜನದಟ್ಟಣೆ ನಿರ್ವಹಣೆ, ಹೆಚ್ಚುವರಿ ಭದ್ರತೆ ಮತ್ತು ಸಂಚಾರ ನಿಯಂತ್ರಣ ಕ್ರಮ, ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆಗೆ ಸರ್ಕಾರ ಆದೇಶಿಸಿದೆ.ಮಹಾಕುಂಭದಲ್ಲಿ ನಡೆಯುವ ಪವಿತ್ರ ಶಾಹಿಸ್ನಾನಗಳಲ್ಲಿ ವಸಂತ ಪಂಚಮಿ ಪ್ರಮುಖವಾಗಿದೆ. ಫೆ.12ರಂದು ಮಾಘ ಪೂರ್ಣಿಮೆ ಮತ್ತು ಫೆ.26ರಂದು ಮಹಾಶಿವರಾತ್ರಿಯ ದಿನ ಕೊನೆಯ ಎರಡು ಪುಣ್ಯ ಸ್ನಾನ ನೆರವೇರಲಿವೆ. ಜ.13ರಂದು ಆರಂಭವಾದ ಕುಂಭಮೇಳಕ್ಕೆ ಇದುವರೆಗೆ 33 ಕೋಟಿಗೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ಫೆ.26ರ ಶಿವರಾತ್ರಿಯಂದು ಮೇಳ ಮುಕ್ತಾಯವಾಗಲಿದ್ದು, ಒಟ್ಟು 40-45 ಕೋಟಿ ಜನರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ನಿರೀಕ್ಷೆ ಇದೆ.
ಅಯೋಧ್ಯೆಗೆ 15 ಲಕ್ಷ ಭಕ್ತರು
ಅಯೋಧ್ಯೆ: ಕುಂಭಮೇಳದ ಜೊತೆಜೊತಗೇ ಅಯೋಧ್ಯೆಗೆ ಆಗಮಿಸುವ ಭಕ್ತರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಮುಂದುವರೆದಿದ್ದು ಭಾನುವಾರ 15 ಲಕ್ಷಕ್ಕೂ ಅಧಿಕ ಜನರು ಬಾಲರಾಮನ ದರ್ಶನ ಪಡೆದಿದ್ದಾರೆ. ಸೋಮವಾರ ವಸಂತ ಪಂಚಮಿ ಪರ್ವವಿರಲಿದ್ದು, ಜನ ಸಾಗರೋಪಾದಿಯಲ್ಲಿ ಬಂದು ಸರಯೂ ನದಿಯಲ್ಲಿ ಮಿಂದೇಳುವ ನಿರೀಕ್ಷೆಯಿದೆ.