ಸಾರಾಂಶ
ಮುಂಬೈ : ಕೃಷ್ಣಾ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಮಾಡದಂತೆ ಕರ್ನಾಟಕವನ್ನು ತಡೆಯಬೇಕು ಎಂದು ಕೋರಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಲಾಶಯ ಎತ್ತರ ಹೆಚ್ಚಳದಿಂದ ಕರ್ನಾಟಕದ ಗಡಿಯಲ್ಲಿರುವ, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಲಿದೆ. ಆದ ಕಾರಣ ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಪೂರ್ಣಗೊಳ್ಳುವ ತನಕ ಡ್ಯಾಂನ ಎತ್ತರ ಹೆಚ್ಚಳ ಮಾಡದಂತೆ ಸೂಚಿಸಲು ಫಡ್ನವೀಸ್ ಕೇಂದ್ರವನ್ನು ಕೋರಿದ್ದಾರೆ.
ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರಿಗೆ ಪತ್ರ ಬರೆದಿರುವ ಬಿಜೆಪಿ ಮುಖ್ಯಮಂತ್ರಿ, ‘ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519.6 ಮೀ. ನಿಂದ 524.256 ಮೀ.ಗೆ ಹೆಚ್ಚಿಸುವ ನಿರ್ಧಾರವು ಮಹಾರಾಷ್ಟ್ರಕ್ಕೆ ತೀವ್ರ ಕಳವಳಕಾರಿಯಾಗಿದೆ. ಒಂದೊಮ್ಮೆ ಇದು ಕಾರ್ಯರೂಪಕ್ಕೆ ಬಂದರೆ, ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಬಿಕ್ಕಟ್ಟು ಉಲ್ಬಣಗೊಳ್ಳುತ್ತದೆ. ಇದರಿಂದ ಈ ಪ್ರದೇಶದಲ್ಲಿ ಜೀವ, ಆಸ್ತಿ ಮತ್ತು ಕೃಷಿ ಭೂಮಿಗೆ ತೀವ್ರ ಹಾನಿಯುಂಟಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜತೆಗೆ, ‘ಆಲಮಟ್ಟಿಯ ಹಿನ್ನೀರಿನಿಂದ ನದಿ ಮತ್ತು ಅಣೆಕಟ್ಟೆಯಲ್ಲಿ ಹೂಳು ಶೇಖರಣೆಯಾಗಿ, ಕೃಷ್ಣಾ ನದಿಯ ನೀರಿನ ಸರಾಗ ಹರಿಯುವಿಕೆಗೆ ಸಮಸ್ಯೆಯಾಗುತ್ತದೆ’ ಎಂದೂ ದೂರಿರುವ ಸಿಎಂ, ‘ಮಹಾರಾಷ್ಟ್ರ ಸರ್ಕಾರವು ರೂರ್ಕಿಯ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯನ್ನು ಆಲಮಟ್ಟಿಯ ಹಿನ್ನೀರಿನ ಪ್ರಭಾವದ ಅಧ್ಯಯನ ನಡೆಸುವಂತೆ ಕೇಳಿಕೊಂಡಿದ್ದು, ಅಂತಿಮ ವರದಿಗಾಗಿ ಕಾಯುತ್ತಿದೆ. ಆ ಅಧ್ಯಯನ ಪೂರ್ಣಗೊಳ್ಳುವ ಮುನ್ನ ಯಾವುದೇ ನಿರ್ಧಾರ ತೆಗೆದುಕೊಂಡರೆ ಅದು ಅನಾಹುತಕ್ಕೆ ಎಡೆಮಾಡಿಕೊಡುತ್ತದೆ’ ಎಂದು ಎಚ್ಚರಿಸಿದ್ದಾರೆ.
ಫಡ್ನವೀಸ್ ವಾದವೇನು?
- 519.6 ಮೀಟರ್ ಇರುವ ಆಲಮಟ್ಟಿ ಡ್ಯಾಂ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಿದರೆ ಮಹಾರಾಷ್ಟ್ರಕ್ಕೆ ತೊಂದರೆ
- ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹವಾಗುತ್ತೆ. ಜೀವ, ಆಸ್ತಿ, ಕೃಷಿ ಭೂಮಿಗೆ ತೀವ್ರ ಹಾನಿ ಉಂಟಾಗಲಿದೆ
- ಆಲಮಟ್ಟಿ ಹಿನ್ನೀರಿನಿಂದ ನದಿ, ಅಣೆಕಟ್ಟೆಯಲ್ಲಿ ಹೂಳು ಶೇಖರಣೆಯಾಗುತ್ತದೆ. ನದಿ ಸರಾಗವಾಗಿ ಹರಿಯೋಲ್ಲ
- ವೈಜ್ಞಾನಿಕ ಅಧ್ಯಯನ ನಡೆಯುವವರಿಗೆ ಆಲಮಟ್ಟಿ ಅಣೆಕಟ್ಟೆ ಎತ್ತರಕ್ಕೆ ಅನುಮತಿ ನೀಡಬಾರದು : ಕೇಂದ್ರಕ್ಕೆ ಮನವಿ