ಸಾರಾಂಶ
ಮುಂಬೈ: ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿರುವ ಮಹಾರಾಷ್ಟ್ರದ ಶಿವಸೇನೆ v/s ಶಿವಸೇನೆ ಪ್ರಕರಣದ ತೀರ್ಪನ್ನು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಬುಧವಾರ ಪ್ರಕಟಿಸಲಿದ್ದಾರೆ.
ಈ ತೀರ್ಪು ಮಹಾರಾಷ್ಟ್ರ ಸರ್ಕಾರದ ಮತ್ತು ಪ್ರಾಂತಿಯ ಪಕ್ಷದ ಉಭಯ ಬಣಗಳ ಭವಿಷ್ಯ ನಿರ್ಧರಿಸುವ ಕಾರಣ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ. ಪರಸ್ಪರರ ವಿರುದ್ಧ ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಸಲ್ಲಿಸಿದ್ದ 18 ತಿಂಗಳ ಹಿಂದೆ ಸಲ್ಲಿಸಿದ್ದ ಪಕ್ಷಾಂತರ ನಿಷೇಧ ದೂರಿನ ಕುರಿತು ಸಂಜೆ 4 ಗಂಟೆಗೆ ಸ್ಪೀಕರ್ ತೀರ್ಪು ಪ್ರಕಟಿಸಲಿದ್ದಾರೆ.
ಏಕನಾಥ್ ಶಿಂಧೆ ಬಣದ ಶಾಸಕರು ಪಕ್ಷ ತೊರೆದ ಬಳಿಕ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾವಿಕಾಸ ಅಘಾಡಿ ಸರ್ಕಾರ ಉರುಳಿಬಿದ್ದಿತ್ತು. ಇದಾದ ಬಳಿ ಏಕನಾಥ್ ಶಿಂಧೆ ಬಿಜೆಪಿಯ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪರಸ್ಪರರ ವಿರುದ್ಧ ಉಭಯ ಬಣಗಳು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದವು. ಈ ಕುರಿತು ತೀರ್ಪನ್ನು ನಾರ್ವೇಕರ್ ಬುಧವಾರ ನೀಡಲಿದ್ದಾರೆ.
ತೀರ್ಪು ಪ್ರಕಟವಾಗುವುದಕ್ಕೂ ಮುನ್ನಾದಿನ ಮಾಧ್ಯಮಗಳ ಜೊತೆ ಮಾತನಾಡಿದ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ, ಸ್ಪೀಕರ್ ವಿರುದ್ಧ ಕಿಡಿಕಾರಿದ್ದಾರೆ. ತೀರ್ಪು ಪ್ರಕಟಿಸುವುದಕ್ಕೂ ಮುನ್ನ ಮುಖ್ಯಮಂತ್ರಿ ಏಕನಾಥ್ ಶಿಂಧೆ (ಶಿವಸೇನೆಯ ಮತ್ತೊಂದು ಬಣದ ನಾಯಕ) ಅವರನ್ನು ಸ್ಪೀಕರ್ ಭೇಟಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಉದ್ಧವ್, ಬುಧವಾರ ಏನು ತೀರ್ಪು ಬರಲಿದೆ ಎಂಬುದನ್ನು ಈ ಘಟನೆಯೇ ತೋರಿಸುತ್ತದೆ ಎಂದು ಹೇಳಿದ್ದಾರೆ.
ಈ ಕುರಿತಾಗಿ ತೀರ್ಪು ಪ್ರಕಟಿಸಲು ಸುಪ್ರೀಂಕೋರ್ಟ್ ಜ.10ರ ಗಡುವು ನೀಡಿತ್ತು. ಸ್ಪೀಕರ್ ತೀರ್ಪು ಯಾರ ವಿರುದ್ಧ ಬರುವುದೋ ಆ ಬಣದವರು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ಧತೆಗಳನ್ನು ಸಹ ಆರಂಭಿಸಿದ್ದಾರೆ.