ಭಾರತದಲ್ಲಿ ಮೊದಲ ಟೆಸ್ಲಾ ಕಾರ್‌ ಡೆಲಿವರಿ

| Published : Sep 06 2025, 01:00 AM IST

ಸಾರಾಂಶ

ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದ್ದ ವೈ ಮಾಡೆಲ್‌ ಕಾರಿನ ಮೊದಲ ಡೆಲಿವರಿ ಆಗಿದೆ. ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್‌ ಸರನಾಯಿಕ್‌ ಅವರು ಇದನ್ನು ಮುಂಬೈನಲ್ಲಿರುವ ಟೆಸ್ಲಾದ ಶೋರೂಂನಲ್ಲಿ ಸ್ವೀಕರಿಸಿದ್ದಾರೆ.

- ಮಹಾರಾಷ್ಟ್ರ ಸಚಿವ ಸರನಾಯಿಕ್‌ರಿಂದ ಖರೀದಿ- ಇದನ್ನು ಮೊಮ್ಮಗನಿಗೆ ಕೊಡುವೆ ಎಂದ ಸಚಿವ

- ಇವಿ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಕ್ರಮ

ಪಿಟಿಐ ಮುಂಬೈ

ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದ್ದ ವೈ ಮಾಡೆಲ್‌ ಕಾರಿನ ಮೊದಲ ಡೆಲಿವರಿ ಆಗಿದೆ. ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್‌ ಸರನಾಯಿಕ್‌ ಅವರು ಇದನ್ನು ಮುಂಬೈನಲ್ಲಿರುವ ಟೆಸ್ಲಾದ ಶೋರೂಂನಲ್ಲಿ ಸ್ವೀಕರಿಸಿದ್ದಾರೆ.

ಈ ಮೂಲಕ, ಕಂಪನಿಯ ಅಧಿಕೃತ ಶೋರೂಂನಿಂದ ಮೊದಲ ಟೆಸ್ಲಾ ಕಾರ್‌ ಖರೀದಿಸಿದವರಲ್ಲಿ ಸರ್‌ನಾಯಿಕ್‌ ಮೊದಲಿಗರಾಗಿದ್ದಾರೆ. ಜುಲೈನಲ್ಲಿ ಮುಂಬೈನಲ್ಲಿ ಟೆಸ್ಲಾದ ಮೊದಲ ಶೋರೂಂ ಉದ್ಘಾಟನೆಯಾಗುತ್ತಿದ್ದಂತೆ ಸರ್‌ನಾಯಿಕ್‌ ಅವರು ಕಾರ್‌ಅನ್ನು ಆರ್ಡರ್‌ ಮಾಡಿದ್ದರು. ಜಾಗೃತಿ ಮೂಡಿಸಲು ಖರೀದಿ:

ಕಾರ್‌ ಡೆಲಿವರಿ ಪಡೆದು ಮಾತನಾಡಿದ ಸಚಿವರು, ‘ಇದನ್ನು ವೈಯಕ್ತಿಕ ಬಳಕೆಗಷ್ಟೇ ಖರೀದಿಸಿಲ್ಲ. ಬದಲಿಗೆ, ಜನರಲ್ಲಿ, ವಿಶೇಷವಾಗಿ ಯುವಕರಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಹೆಜ್ಜೆ ಇಟ್ಟಿದ್ದೇನೆ. ಇದರ ದರ ಹೆಚ್ಚಾದರೂ ಒಳ್ಳೆ ಉದಾಹರಣೆಯಾಗುವುದು ಮುಖ್ಯ. ಸುಸ್ಥಿರ ಸಾರಿಗೆಯ ಬಗ್ಗೆ ಜಾಗೃತಿ ಮೂಡಿಸುವ ಸೂಚಕವಾಗಿ ಈ ಕಾರನ್ನು ಮೊಮ್ಮಗನಿಗೆ ಉಡುಗೊರೆಯಾಗಿ ನೀಡಲು ಯೋಜಿಸುತ್ತಿದ್ದೇನೆ’ ಎಂದು ಹೇಳಿದರು. ವಿಶೇಷತೆಯೇನು?:

ಟೆಸ್ಲಾದ ವೈ ಮಾದರಿಯ ಕಾರುಗಳು 2 ವಿಧಗಳಲ್ಲಿ ಲಭ್ಯವಿದೆ. ಆರ್‌ಡಬ್ಲ್ಯು ಕಾರ್‌ಗಳು 60 ಕಿಲೋವ್ಯಾಟ್‌ ಬ್ಯಾಟರಿ ಹೊಂದಿದ್ದು, ಒಮ್ಮೆ ಭರ್ತಿ ಚಾರ್ಜ್‌ ಮಾಡಿದರೆ 500 ಕಿ.ಮೀ. ಚಲಿಸಬಲ್ಲವು. ಎಲ್‌ಆರ್‌ಆರ್‌ಡಬ್ಲ್ಯು ಕಾರುಗಳಾದರೆ 622 ಕಿ.ಮೀ. ಸಾಗುವ ಸಾಮರ್ಥ್ಯ ಹೊಂದಿರುತ್ತವೆ. ಆರ್‌ಡಬ್ಲ್ಯು ಕಾರಿನ ಬೆಲೆ ದೆಹಲಿಯಲ್ಲಿ 59.89 ಲಕ್ಷ ರುಪಾಯಿ. ಭಾರತದಲ್ಲಿ ಪ್ರಸ್ತುತ ಮುಂಬೈ ಮತ್ತು ದೆಹಲಿಯಲ್ಲಿ ಟೆಸ್ಲಾ ಶೋರೂಂ ಇವೆ.