ಸಾರಾಂಶ
ಕೋಲ್ಕತಾ: ಒಂದೇ ಪಕ್ಷದಲ್ಲಿದ್ದರೂ ಸದಾ ಕಾದಾಡುತ್ತಿರುವ ಟಿಎಂಸಿ ಲೋಕಸಭಾ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಮಹುವಾ ಮೊಯಿತ್ರಾ ಮತ್ತದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ. ‘ಮಹುವಾ ನನಗಿಂತ ಕಡಿಮೆ ಮಟ್ಟದಲ್ಲಿರುವಾಕೆ. ಅವರ ಕಡೆ ಗಮನ ಕೊಟ್ಟು ನನ್ನ ಸಮಯ ವ್ಯರ್ಥ ಮಾಡಿಕೊಂಡೆ’ ಎಂದು ಬ್ಯಾನರ್ಜಿ ಹೇಳಿದ್ದಾರೆ. ತಮ್ಮ ಕ್ಷೇತ್ರವಾದ ಶ್ರೀರಾಂಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಹುವಾ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಆಕೆಯಿಂದಾಗಿ ನಾನು ಪಕ್ಷದ ಹಲವು ಸದಸ್ಯರ ಕಣ್ಣಿಗೆ ಕೆಟ್ಟವನಾಗಿದ್ದೇನೆ. ನಾನು ಅವರ ಕಡೆ ಗಮನ ಕೊಟ್ಟು ನನನ ಶಕ್ತಿ ಮತ್ತು ಸಮಯವನ್ನು ವ್ಯರ್ಥಮಾಡಿಕೊಂಡೆ’ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ಮಹುವಾ ಪಿನಾಕಿ ಮಿಶ್ರಾರನ್ನು ಮದುವೆಯಾಗಿದ್ದನ್ನು ಉಲ್ಲೇಖಿಸಿದ್ದ ಬ್ಯಾನರ್ಜಿ, ‘ಆಕೆ ಮನೆಮುರುಕಿ. 40 ವರ್ಷದ ದಾಂಪತ್ಯ ತೊರೆದು 65 ವರ್ಷದವರಿಗೆ ಗಂಟು ಬಿದ್ದಿದ್ದಾರೆ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಹುವಾ, ಕಲ್ಯಾಣ್ ಅವರನ್ನು ಪರೋಕ್ಷವಾಗಿ ಹಂದಿ ಎನ್ನುತ್ತಾ, ‘ಅದರೊಂದಿಗೆ ಗುದ್ದಾಡಿದರೆ ನೀವೂ ಗಲೀಜಾಗುತ್ತೀರ’ ಎಂದಿದ್ದರು.
2 ತಾಸು ಟ್ರಾಫಿಕ್‌ನಲ್ಲಿ ಸಿಲುಕಿ ಆ್ಯಂಬುಲೆನ್ಸ್‌ನಲ್ಲೇ ಮಹಿಳೆ ಸಾವು
ಮುಂಬೈ: ಮರ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು, ಟ್ರಾಫಿಕ್ ಜಾಂನಿಂದ 2 ತಾಸುಗಳ ಕಾಲ ಆ್ಯಂಬುಲೆನ್ಸ್‌ನಲ್ಲಿಯೇ ಸಿಲುಕಿ ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ.ಛಾಯಾ ಪೂರವ್ (49) ಮೃತಪಟ್ಟ ಮಹಿಳೆ. ಜು.31ರಂದು ಇವರ ಮೇಲೆ ಮರ ಬಿದ್ದಿತ್ತು. ಇದರಿಂದಾಗಿ ಪಕ್ಕೆಲುಬು, ಭುಜ ಮತ್ತು ಮುಖಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಆದರೆ ಪಾಲ್ಘರ್‌ನಲ್ಲಿ ಯಾವುದೇ ಅತ್ಯಾಧುನಿಕ ಆಸ್ಪತ್ರೆ ಇಲ್ಲದ ಕಾರಣ ಮಹಿಳೆಯನ್ನು 3 ತಾಸಿನ ಒಳಗೆ 100 ಕಿ.ಮೀ ದೂರದ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದರು. ಆದರೆ ದುರದೃಷ್ಟವಶಾತ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇದ್ದ ಭಾರಿ ವಾಹನ ದಟ್ಟಣೆಯಿಂದಾಗಿ ಆ್ಯಂಬುಲೆನ್ಸ್ ನಿಗದಿತ ಸಮಯದಲ್ಲಿ ಆಸ್ಪತ್ರೆ ತಲುಪಲಾಗದೆ ಮಹಿಳೆ ಮೃತಪಟ್ಟಿದ್ದಾರೆ. ಇವರ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ತಿರುಪತಿ: ಜುಲೈನಲ್ಲಿ ಭರ್ಜರಿ ₹129 ಕೋಟಿ ಕಾಣಿಕೆ ಸಂಗ್ರಹ
ತಿರುಪತಿ: ಈ ವರ್ಷ ಜುಲೈನಲ್ಲಿ ತಿರುಮಲದಲ್ಲಿಯ ವೆಂಕಟೇಶ್ವರ ದೇವರ ಹುಂಡಿಯಲ್ಲಿ 129.45 ಕೋಟಿ ರು. ಸಂಗ್ರಹವಾಗಿದೆ.2024ರ ಜುಲೈನಲ್ಲಿ 125.35 ಕೋಟಿ ರು. ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ 4.09 ಕೋಟಿ ರು. ಹೆಚ್ಚು ಕಾಣಿಕೆ ಬಂದಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ (ಟಿಟಿಡಿ) ಮೂಲಗಳು ಹೇಳಿವೆ.
ಬೇಸಿಗೆ ರಜೆ ಮುಗಿದದ್ದರಿಂದ ಶಾಲಾ ಕಾಲೇಜುಗಳು ತೆರೆದಿವೆ. ಆದರೂ ಜುಲೈನಲ್ಲಿ ಯಾತ್ರಿಕರ ಆಗಮನ ಹೆಚ್ಚಾಗಿದೆ. ಈ ವರ್ಷ ಇಲ್ಲಿಯವರೆಗೆ 23.76 ಲಕ್ಷ ಭಕ್ತರು ತಿರುಪತಿಗೆ ನಮಿಸಿದ್ದಾರೆ. ಭಕ್ತರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.7.4 ಏರಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಿಯಕರನನ್ನು ಮನೆಗೆ ಕರೆಸಿ ಸ್ಕ್ರೂ ಡ್ರೈವರ್‌ನಿಂದ ಕೊಲೆ
ಸಂಭಲ್ (ಯುಪಿ): ಇಲ್ಲಿನ ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನು ಮನೆಗೆ ಕರೆಸಿ ತನ್ನ ಪತಿ ಜೊತೆ ಸೇರಿ ಸ್ಕ್ರೂಡ್ರೈವರ್, ಕಟಿಂಗ್ ಪ್ಲೇಯರ್‌ನಿಂದ ಆತನ ಮೇಲೆ ದಾಳಿ ಮಾಡಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಅನೀಶ್ (45) ಕೊಲೆಯಾದ ದುರ್ದೈವಿ.ಸಿತಾರಾ ಎಂಬ ಮಹಿಳೆ ರಯೀಸ್ ಅಹ್ಮದ್ ಎಂಬಾತನ ಜತೆ ವಿವಾಹವಾಗಿದ್ದಳು. ಆಕೆಯೊಂದಿಗೆ ಅನೀಶ್ ರಿಲೇಷನ್‌ಶಿಪ್‌ನಲ್ಲಿರಲು ಹಾತೊರೆಯೊತ್ತಿದ್ದ. ಆದರೆ ಇದು ಸಿತಾರಾಗೆ ಇಷ್ಟವಿರಲಿಲ್ಲ. ಹೀಗಾಗಿ ರಯೀಸ್ ಮತ್ತು ಸಿತಾರಾ ಅನೀಶ್‌ನ ಕೊಲೆ ಜಾಲ ಹೆಣೆದು, ಅನೀಶ್‌ನನ್ನು ಮನೆಗೆ ಕರೆಸಿಕೊಂಡರು. ಆತನ ಮೇಲೆ ಸ್ಕ್ರೂಡ್ರೈವರ್, ಕಟಿಂಗ್ ಪ್ಲೇಯರ್ ನಂತಹ ವಸ್ತುಗಳಿಂದ ದಾಳಿ ಮಾಡಿದರು. ಬಳಿಕ ಇವರಿಂದ ತಪ್ಪಿಸಿಕೊಂಡ ಅನೀಶ್ ಮನೆಗೆ ಹೋದ. ಅಲ್ಲಿ ಕೊನೆಯುಸಿರೆಳೆದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಅನೀಶ್ ತಂದೆ ಮಾತನಾಡಿ, ಅನೀಶ್ ಸಾಲ ವಾಪಸು ಪಡೆಯಲು ಹೋದಾಗ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
2026ರಿಂದ ಸಿಬಿಎಸ್‌ಇ 9ನೇ ಕ್ಲಾಸ್ ಮಕ್ಕಳಿಕೆ ತೆರೆದ ಪುಸ್ತಕ ಪರೀಕ್ಷೆ
ನವದೆಹಲಿ: 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ, 9ನೇ ತರಗತಿ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆಯನ್ನು ಜಾರಿಗೊಳಿಸಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಿರ್ಧರಿಸಿದೆ.ಹೊಸ ನೀತಿ ಜಾರಿಯಾದರೆ, ವಿದ್ಯಾರ್ಥಿಗಳು ಪಠ್ಯಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ.ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು-2023 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಸಮನ್ವಯದೊಂದಿಗೆ ಹೊಸ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಹಳೆಯ ಪರೀಕ್ಷಾ ಪದ್ಧತಿ ಕಂಠಪಾಠಕ್ಕೆ ಹೆಚ್ಚು ಪ್ರಾಮುಖ್ಯ ಕೊಟ್ಟರೆ, ಹೊಸ ನೀತಿಯು ಸಾಮರ್ಥ್ಯ ಆಧರಿತ ಕಲಿಕೆಗೆ ಮಹತ್ವ ಕೊಡಲಿದೆ. ಮುಖ್ಯ ಕಲಿಕಾ ವಿಷಯಗಳಾದ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನವನ್ನು ಇದು ಒಳಗೊಳ್ಳಲಿದೆ. ಈ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಶಾಲೆಗಳಿಗೆ ನೀಡಲಾಗಿದೆ.