ಮಾಝಿ ಒಡಿಶಾ ಮೊದಲ ಬಿಜೆಪಿ ಸಿಎಂ

| Published : Jun 12 2024, 12:30 AM IST / Updated: Jun 12 2024, 12:31 AM IST

ಸಾರಾಂಶ

ಆದಿವಾಸಿ ನಾಯಕ ಮೋಹನ್ ಚರಣ್ ಮಾಝಿ ಅವರನ್ನು ಒಡಿಶಾದ ಮುಂದಿನ ಮುಖ್ಯಮಂತ್ರಿ ಎಂದು ಎಂದು ಬಿಜೆಪಿ ಘೋಷಿಸಿದೆ.

ಭುವನೇಶ್ವರ: ಆದಿವಾಸಿ ನಾಯಕ ಮೋಹನ್ ಚರಣ್ ಮಾಝಿ ಅವರನ್ನು ಒಡಿಶಾದ ಮುಂದಿನ ಮುಖ್ಯಮಂತ್ರಿ ಎಂದು ಎಂದು ಬಿಜೆಪಿ ಘೋಷಿಸಿದೆ. ಈ ಮೂಲಕ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಗಲಿದ್ದಾರೆ. ಉಪಮುಖ್ಯಮಂತ್ರಿಗಳಾಗಿ ಕನಕ ವರ್ಧನ್ ಸಿಂಗ್ ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಹೆಸರಿಸಲಾಗಿದೆ.ಈ ಎಲ್ಲರೂ ಬುಧವಾರ ಸಂಜೆ 4.45ಕ್ಕೆ ಭುವನೇಶ್ವರದ ಜನತಾ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

147 ಸದಸ್ಯ ಬಲದ ಸದನದಲ್ಲಿ ಬಿಜೆಪಿ ಇತ್ತೀಚೆಗೆ 78 ಸ್ಥಾನ ಗೆದ್ದು ಸರಳ ಬಹುಮತ ಸಂಪಾದಿಸಿತ್ತು. ಬಿಜೆಡಿಯ ನವೀನ್‌ ಪಟ್ನಾಯಕ್‌ 24 ವರ್ಷ ಬಳಿಕ ಅನಿರೀಕ್ಷಿತವಾಗಿ ಅಧಿಕಾರ ಕಳೆದುಕೊಂಡಿದ್ದರು.

ಇದರ ಬೆನ್ನಲ್ಲೇ ಸಿಎಂ ಹುದ್ದೆಗೆ ಹಿರಿಯ ನಾಯಕರಾದ ಧರ್ಮೇಂದ್ರ ಪ್ರಧಾನ್‌, ಜುವಾಲ್‌ ಓರಾಂ, ಸಂಬಿತ್‌ ಪಾತ್ರ, ಜೈ ಪಾಂಡ ಸೇರಿ ಕೆಲವರ ಮಧ್ಯೆ ಪೈಪೋಟಿ ನಡೆದಿತ್ತು. ಆದರೆ ಇವರೆಲ್ಲ ಲೋಕಸಭೆ ಸದಸ್ಯರು. ಹೀಗಾಗಿ ಶಾಸಕರಿಗೆ ಹಾಗೂ ತಳಮಟ್ಟದ ರಾಜಕಾರಣಿಗೆ ಮಣೆ ಹಾಕುವ ನಿಟ್ಟಿನಲ್ಲಿ ಈಗ 4 ಬಾರಿಯ ಶಾಸಕ ಮೋಹನ್‌ ಚರಣ್‌ ಮಾಝಿ ಅವರಿಗೆ ರಾಜ್ಯದ ಉನ್ನತ ಹುದ್ದೆ ನೀಡಲಾಗಿದೆ.

ಮಂಗಳವಾರ ಸಂಜೆ 4:30ಕ್ಕೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮಾಝಿ ಅವರನ್ನು ಆಯ್ಕೆ ಮಾಡಲಾಯಿತು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಭೂಪೇಂದ್ರ ಯಾದವ್ ವೀಕ್ಷಕರಾಗಿ ಸಭೆಯಲ್ಲಿ ಭಾಗವಹಿಸಿದ್ದರು.

ಯಾರು ಮಾಝಿ?:

53 ವರ್ಷದ ಮೋಹನ ಮಾಝಿ ಅವರು 2000, 2009, 2019 ಹಾಗೂ 2024ರಲ್ಲಿ ಒಡಿಶಾದ ಕ್ಯೋಂಝಾರ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಆದಿವಾಸಿ ಜನಾಂಗದವರಾದ ಇವರು ಪಕ್ಷ ಸಂಘಟನೆಯಲ್ಲಿ ಹೆಸರುವಾಸಿ. ಒಡಿಶಾದಂಥ ಹಿಂದುಳಿದ ರಾಜ್ಯದಲ್ಲಿ ಆದಿವಾಸಿಗಳಿಗೆ ಮಣೆ ಹಾಕುವ ಉದ್ದೇಶದಿಂದ ಹಾಗೂ ತಳಮಟ್ಟದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರಲು ಕಾರಣವಾಗಿದ್ದರಿಂದ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ.