ಸಾರಾಂಶ
ಪಟನಾ: ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಪ್ರಕರಣಗಳ ನಡುವೆಯೇ ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಧರಿಸುವಂತೆ ಮಾಡಿದರೆ ಭರ್ಜರಿ 10 ಲಕ್ಷ ರು. ನೆರವು ನೀಡುವುದಾಗಿ ವಂಚಿಸುತ್ತಿದ್ದ ಜಾಲವೊಂದು ಬಿಹಾರದಲ್ಲಿ ಸಕ್ರಿಯವಾಗಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ:ನವಾಡ ಜಿಲ್ಲೆಯೆ ಕಹುರಾ ಗ್ರಾಮದ ವಂಚಕರ ತಂಡವೊಂದು ಜಾಲತಾಣಗಳ ಮೂಲಕ ‘ಆಲ್ ಇಂಡಿಯಾ ಪ್ರಗ್ನೆಂಟ್ ಜಾಬ್ ಸರ್ವೀಸ್’ ಎಂಬ ಕೆಲಸದ ಆಫರ್ ನೀಡಿತ್ತು. ಕೆಲಸ ಬಹಳ ಸುಲಭವಾಗಿದ್ದು. ನಾನಾ ಕಾರಣಗಳಿಂದ ಮಕ್ಕಳಾಗದ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಅವರು ಗರ್ಭಧರಿಸುವಂತೆ ಮಾಡುವುದು. ಒಂದು ವೇಳೆ ಮಹಿಳೆಯರು ಗರ್ಭಧರಿಸಿದರೆ 10 ಲಕ್ಷ ರು. ನೀಡಲಾಗುವುದು. ಒಂದು ವೇಳೆ ಗರ್ಭ ಧರಿಸಲು ವಿಫಲವಾದರೂ 50000 ರು. ಖಚಿತ ಎಂದು ಭರವಸೆ ನೀಡಲಾಗಿತ್ತು.
ವಂಚನೆ ಹೇಗೆ?:ಮೇಲ್ಕಂಡ ಆಫರ್ ಮೂಲಕ ಅಮಾಯಕರನ್ನು ಗುಂಪು ಸೆಳೆಯುತ್ತಿತ್ತು. ಯಾರು ಆಸಕ್ತಿ ವಹಿಸಿ ವಂಚಕರನ್ನು ಸಂಪರ್ಕಿಸುತ್ತಿದ್ದರೋ ಅವರಿಂದ ಮೊದಲಿಗೆ ನೋಂದಣಿ ಹೆಸರಲ್ಲಿ ಸ್ವಲ್ಪ ಹಣ ವಸೂಲಿ ಮಾಡಲಾಗುತ್ತಿತ್ತು. ಹೀಗೆ ನೋಂದಣಿ ಮಾಡಿಕೊಂಡವರಿಂದ ಆಧಾರ್ ಮತ್ತು ಪಾನ್ ಕಾರ್ಡ್ ಪಡೆದು ನಂಬಿಕೆ ಬರುವಂತೆ ಮಾಡಲಾಗುತ್ತಿತ್ತು. ಇದಾದ ಕೆಲ ದಿನಗಳ ಬಳಿಕ ಸಂತ್ರಸ್ತರಿಗೆ ಸುಂದರ ಮಹಿಳೆಯರ ಫೋಟೋ ಕಳುಹಿಸಲಾಗುತ್ತಿತ್ತು.
ಬಳಿಕ ಮತ್ತೊಂದು ಹಂತದಲ್ಲಿ ಶುಲ್ಕ ಹಾಗೂ ಹೋಟೆಲ್ ಬುಕಿಂಗ್ ವೆಚ್ಚವೆಂದು ಹಣ ಸಂಗ್ರಹಿಸಲಾಗುತ್ತಿತ್ತು. ಈ ರೀತಿಯ ಶುಲ್ಕವನ್ನು ಮಹಿಳೆಯರ ಸೌಂದರ್ಯದ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು. ಹೆಚ್ಚು ಸುಂದರ ಮಹಿಳೆಯರ ಫೋಟೋ ಯಾರಿಗೆ ಕಳುಹಿಸಲಾಗುತ್ತಿತ್ತೋ ಅವರಿಂದ ಹೆಚ್ಚು ಹಣ ಸಂಗ್ರಹಿಸಲಾಗುತ್ತಿತ್ತು. ಹೀಗೆ ಹಣ ಸಂಗ್ರಹಿಸಿದ ಬಳಿಕ ವಂಚಕರ ತಂಡ ಸಂತ್ರಸ್ತರದಿಂದ ದೂರವಾಗುತಿತ್ತು.ಇತ್ತೀಚೆಗೆ ಹೀಗೆ ಭಾರೀ ಉದ್ಯೋಗದ ಅವಕಾಶ ನಂಬಿ ಹಣ ಕೊಟ್ಟ ವ್ಯಕ್ತಿಯೊಬ್ಬ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಕೂಡಾ ಇಂಥದ್ದೇ ಜಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದರು.