ಮೇಕ್‌ ಇನ್‌ ಅಮೆರಿಕ ಪಾಲಿಸಿ, ಇಲ್ಲವೇ ಸುಂಕ ಎದುರಿಸಿ : ಅಧ್ಯಕ್ಷ ಡೊನಾಲ್ಡ್ ಟ್ರಂಪ್‌

| Published : Jan 24 2025, 01:48 AM IST / Updated: Jan 24 2025, 04:31 AM IST

President Donald Trump

ಸಾರಾಂಶ

‘ಅಮೆರಿಕದಲ್ಲಿ ನಿಮ್ಮ ಉತ್ಪನ್ನಗಳನ್ನು ತಯಾರಿಸಿ. ಇಲ್ಲದಿದ್ದರೆ ಹೆಚ್ಚುವರಿ ಸುಂಕವನ್ನು ಪಾವತಿಸಿ’ ಎಂದು ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗುಡುಗಿದ್ದಾರೆ.  

ದಾವೋಸ್: ‘ಅಮೆರಿಕದಲ್ಲಿ ನಿಮ್ಮ ಉತ್ಪನ್ನಗಳನ್ನು ತಯಾರಿಸಿ. ಇಲ್ಲದಿದ್ದರೆ ಹೆಚ್ಚುವರಿ ಸುಂಕವನ್ನು ಪಾವತಿಸಿ’ ಎಂದು ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗುಡುಗಿದ್ದಾರೆ. ಈ ಮೂಲಕ ಭಾರತ ಸೇರಿ ಬ್ರಿಕ್ಸ್‌ ದೇಶದ ವಸ್ತುಗಳಿಗೆ ಅಮೆರಿಕವು ಶೇ.100ರಷ್ಟು ಸುಂಕ ವಿಧಿಸಲಿದೆ ಎಂಬ ತಮ್ಮ ಇತ್ತೀಚಿನ ಹೇಳಿಕೆಗೆ ಹೊಸ ಸೇರ್ಪಡೆ ಮಾಡಿದ್ದಾರೆ.

ಗುರುವಾರ ರಾತ್ರಿ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಗೆ ವಿಡಿಯೋ ಸಂದೇಶ ಕಳಿಸಿರುವ ಟ್ರಂಪ್‌, ‘ಅಮೆರಿಕದಲ್ಲಿ ನಿಮ್ಮ ಉತ್ಪನ್ನವನ್ನು ಉತ್ಪಾದಿಸಿದರೆ ಮತ್ತು ಭೂಮಿಯ ಮೇಲಿನ ಯಾವುದೇ ರಾಷ್ಟ್ರಕ್ಕಿಂತ ಅತ್ಯಂತ ಕಡಿಮೆ ತೆರಿಗೆಯನ್ನು ನಾವು ವಿಧಿಸುತ್ತೇವೆ’ ಎಂದರು.

‘ಹಾಗಂತ ನಾವು ಅಮೆರಿಕದಲ್ಲೇ ಉತ್ಪನ್ನ ಸಿದ್ಧಪಡಿಸಿ ಎಂದು ಬಲವಂತ ಮಾಡುವುದಿಲ್ಲ. ಅದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಒಂದು ವೇಳೆ ಉತ್ಪಾದಿಸದೇ ಇದ್ದರೆ ನಂತರ ನೀವು ಸುಂಕವನ್ನು ಪಾವತಿಸಬೇಕಾಗುತ್ತದೆ ಅಷ್ಟೇ’ ಎಂದು ಜಾಗತಿಕ ನಾಯಕರಿಗೆ ಎಚ್ಚರಿಕೆ ನೀಡಿದರು.

ತನ್ನ ವ್ಯಾಪಕ ಭಾಷಣದಲ್ಲಿ, ಟ್ರಂಪ್ ಉಕ್ರೇನ್ ಯುದ್ಧ ಮತ್ತು ತೈಲ ಬೆಲೆಗಳ ನಡುವೆ ಸಂಪರ್ಕ ಇದೆ ಎಂದು ಪ್ರತಿಪಾದಿಸಿದರು. ‘ಸೌದಿ ಅರೇಬಿಯಾ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಸ್ಥೆಗೆ ಕಚ್ಚಾ ಬೆಲೆಯನ್ನು ಇಳಿಸುವಂತೆ ಕೇಳಿಕೊಳ್ಳುತ್ತೇನೆ. ಒಂದು ವೇಳೆ ಬೆಲೆ ಇಳಿಕೆಯಾದರೆ ರಷ್ಯಾ-ಉಕ್ರೇನ್ ಯುದ್ಧ ತಕ್ಷಣವೇ ಅಂತ್ಯಗೊಳ್ಳಲಿದೆ’ ಎಂದರು