ಕಳೆದ ಸಲಕ್ಕಿಂತ ಆಸ್ತಿ 1.35 ಲಕ್ಷ ರು. ಇಳಿಕೆಒಂದೂ ಕಾರಿಲ್ಲ । ಕೈಲಿದೆ 76 ಸಾವಿರ ರು.ದೀದಿ ಮೇಲೆ ಒಂದೂ ಕ್ರಿಮಿನಲ್‌ ಕೇಸಿಲ್ಲ

ಕೋಲ್ಕತಾ: ಒಂದೆಡೆ ರಾಜಕಾರಣಿಗಳ ಆಸ್ತಿ ಏರುತ್ತಿದ್ದರೆ, ‘ದೇಶದ ಅತಿ ಬಡ ಮುಖ್ಯಮಂತ್ರಿ’ ಎನ್ನಿಸಿಕೊಂಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಸ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ 1.35 ಲಕ್ಷ ರು. ಇಳಿಕೆಯಾಗಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಬಾನಿಪುರದಲ್ಲಿ ಅವರು ಬುಧವಾರ ಸಲ್ಲಿಸಿರುವ ಅಫಿಡವಿಟ್‌ನಿಂದ ಇದು ತಿಳಿದುಬಂದಿದೆ. ಕಳೆದ ಬಾರಿಯ ಅಫಿಡವಿಟ್‌ನಲ್ಲಿ 16.72 ಲಕ್ಷ ರು. ಇದ್ದ ಅವರ ಸಂಪತ್ತು ಈಗ 15.37 ಲಕ್ಷ ರು.ಗೆ ತಗ್ಗಿದೆ.

ಸದ್ಯ ಮಮತಾ ಬಳಿ 75,700 ರು. ನಗದು ಇದ್ದು, ಬ್ಯಾಂಕ್‌ ಖಾತೆಯಲ್ಲಿ 12.7 ಲಕ್ಷ ರು. ಇದೆ. ಜತೆಗೆ ಮೂಲದಲ್ಲೇ ಕಡಿತವಾಗುವ ತೆರಿಗೆ (ಟಿಡಿಎಸ್‌) 40,600 ರು. ಆಗಿದೆ. ತಮ್ಮ ಬಳಿ 1.45 ಲಕ್ಷ ರು. ಮೌಲ್ಯದ ಆಭರಣಗಳಿರುವುದಾಗಿ ಘೋಷಿಸಿಕೊಂಡಿರುವ ಅವರು, ಯಾವುದೇ ಷೇರು, ಬಾಂಡ್‌, ವಿಮೆಗಳಲ್ಲಿ ಹೂಡಿಕೆ ಮಾಡಿಲ್ಲ. ಅಂತೆಯೇ, ಸ್ವಂತ ವಾಹನವನ್ನೂ ಹೊಂದಿಲ್ಲ. 2024-25ರಲ್ಲಿ ತಮ್ಮ ಒಟ್ಟು ಆದಾಯ 23.21 ಲಕ್ಷ ರು. ಎಂದು ಮಮತಾ ತಿಳಿಸಿದ್ದಾರೆ.ಜತೆಗೆ ಅವರ ಮೇಲೆ ಯಾವುದೇ ಕ್ರಿಮಿನಲ್‌ ಅಪರಾಧಗಳು ದಾಖಲಾಗಿಲ್ಲ.