ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಉದ್ದೇಶಿಸಿ ಪ.ಬಂಗಾಳ ಸಿಎಂ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ದ್ವೇಷಭಾಷಣ ಮಾಡಿದ್ದು, ಶಾ ಅವರನ್ನು ದುಶ್ಶಾಸನನಿಗೆ ಹೋಲಿಸಿದ್ದಾರೆ. ಅಲ್ಲದೆ, ಇತರ ಬಿಜೆಪಿ ನಾಯಕರನ್ನು ಶಕುನಿ ಹಾಗೂ ದುರ್ಯೋಧನನಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.
ಕೋಲ್ಕತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಉದ್ದೇಶಿಸಿ ಪ.ಬಂಗಾಳ ಸಿಎಂ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ದ್ವೇಷಭಾಷಣ ಮಾಡಿದ್ದು, ಶಾ ಅವರನ್ನು ದುಶ್ಶಾಸನನಿಗೆ ಹೋಲಿಸಿದ್ದಾರೆ. ಅಲ್ಲದೆ, ಇತರ ಬಿಜೆಪಿ ನಾಯಕರನ್ನು ಶಕುನಿ ಹಾಗೂ ದುರ್ಯೋಧನನಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಬಂಗಾಳಕ್ಕೆ ಶಕುನಿಯ ಶಿಷ್ಯ ದುಶ್ಶಾಸನ ಬಂದಿದ್ದಾನೆ
ಮಂಗಳವಾರ ಬಂಕುರಾದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಮಮತಾ, ‘ಇಂದು ಬಂಗಾಳಕ್ಕೆ ಶಕುನಿಯ ಶಿಷ್ಯ ದುಶ್ಶಾಸನ (ಅಮಿತ್ ಶಾ) ಮಾಹಿತಿ ಸಂಗ್ರಹಿಸಲು ಬಂದಿದ್ದಾನೆ. ಚುನಾವಣೆಗಳು ಬರುತ್ತಿದ್ದಂತೆ ದುಶ್ಶಾಸನ ಮತ್ತು ದುರ್ಯೋಧನ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತಾರೆ’ ಎಂದು ಮಂಗಳವಾರದ ಅಮಿತ್ ಶಾ ಅವರ ಬಂಗಾಳ ಭೇಟಿಯನ್ನು ಪ್ರಶ್ನಿಸಿದರು.
ನಾನು ಭೂಮಿ ನೀಡದಿದ್ದರೆ, ಏನಾಗುತ್ತಿತ್ತು
‘ಇಂದು, ಅವರು (ಶಾ) ಮಮತಾ ಬ್ಯಾನರ್ಜಿ ಬಾಂಗ್ಲಾ ಗಡಿ ಬೇಲಿಗೆ ಭೂಮಿ ನೀಡಲಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಭೂಮಿ ನೀಡದಿದ್ದರೆ, ಏನಾಗುತ್ತಿತ್ತು? ಪೆಟ್ರಾಪೋಲ್‌ನಲ್ಲಿ ಭೂಮಿಯನ್ನು ಯಾರು ಕೊಟ್ಟರು? ಆಂಡಾಲ್‌ನಲ್ಲಿ ಭೂಮಿಯನ್ನು ಯಾರು ಕೊಟ್ಟರು?’ ಎಂದು ಪ್ರಶ್ನಿಸಿದರು.
ಪಶ್ಚಿಮ ಬಂಗಾಳದ ಗಡಿಯ ಮೂಲಕ ಒಳನುಸುಳುವಿಕೆ ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ ಎಂಬ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ನುಸುಳುಕೋರರು ಬಂಗಾಳದಿಂದ ಮಾತ್ರ ಬರುತ್ತಾರೆ ಎಂದು ಅವರು ಹೇಳುತ್ತಾರೆ. ಹಾಗಿದ್ದಲ್ಲಿ, ಕಾಶ್ಮೀರಕ್ಕೆ ಅಕ್ರಮ ನುಸುಳಿಕೋರರ ಸಮಸ್ಯೆ ಇಲ್ಲವೆ? ಪಹಲ್ಗಾಂನಲ್ಲಿ ದಾಳಿ ಮಾಡಿದವರು ಯಾರು?’ ಎಂದು ಪ್ರಶ್ನಿಸಿದರು.
ಅಲ್ಲದೆ, ಚುನಾವಣಾ ಮತಪಟ್ಟಿ ಪರಿಷ್ಕರಣೆಯನ್ನು ಎಐ (ಕೃತಕ ಬುದ್ಧಿಮತ್ತೆ) ಬಳಸಿ ಮಾಡಲಾಗುತ್ತಿದೆ. ಮತದಾರರಿಗೆ, ಚುನಾವಣಾ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

