ಗಾಂಧಿ ಕುಟುಂಬದ ಕುಡಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಪುತ್ರ ರೈಹಾನ್ ವಾದ್ರಾ ಅವರ ವಿವಾಹ ನಿಶ್ಚಿತಾರ್ಥವು, ಅವರ ಬಹುಕಾಲದ ಗೆಳತಿ ಅವಿವಾ ಬೇಗ್ ಜತೆ ಮಂಗಳವಾರ ನೆರವೇರಿದೆ.
ರಣಥಂಬೋರ್ (ರಾಜಸ್ಥಾನ): ಗಾಂಧಿ ಕುಟುಂಬದ ಕುಡಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಪುತ್ರ ರೈಹಾನ್ ವಾದ್ರಾ ಅವರ ವಿವಾಹ ನಿಶ್ಚಿತಾರ್ಥವು, ಅವರ ಬಹುಕಾಲದ ಗೆಳತಿ ಅವಿವಾ ಬೇಗ್ ಜತೆ ಮಂಗಳವಾರ ನೆರವೇರಿದೆ.
ಅವಿವಾ ಬೇಗ್ ಅವರು ಉದ್ಯಮಿ ಇಮ್ರಾನ್ ಬೇಗ್ ಹಾಗೂ ಇಂಟೀರಿಯರ್ ಡಿಸೈನರ್ ಆಗಿರುವ ನಂದಿತಾ ಬೇಗ್ ಅವರ ಪುತ್ರಿ. 25 ವರ್ಷದ ರೈಹಾನ್ ಕಳೆದ 7 ವರ್ಷಗಳಿಂದ ಅವಿವಾ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ರಾಜಸ್ಥಾನದ ರಣಥಂಬೋರ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ಜರುಗಿದೆ. ಈ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಇದ್ದರು. ಕೆಲವೇ ತಿಂಗಳಲ್ಲಿ ಇಬ್ಬರ ಮದುವೆ ನಡೆಯಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಯಾರು ಈ ಅವಿವಾ ಬೇಗ್?:
ಪ್ರಿಯಾಂಕಾ ಪುತ್ರ ರೈಹಾನ್, ದೃಶ್ಯ ಕಲಾವಿದ ಹಾಗೂ ಛಾಯಾಗ್ರಾಹಕನಾಗಿದ್ದರೆ, ದೆಹಲಿ ಮೂಲದ ಉದ್ಯಮಿ ಇಮ್ರಾನ್ ಬೇಗ್ ಹಾಗೂ ನಂದಿತಾ ಬೇಗ್ ಅವರ ಪುತ್ರಿ ಅವಿವಾ ಬೇಗ್ ಇಂಟೀರಿಯರ್ ಡಿಸೈನರ್. ಛಾಯಾಗ್ರಾಹಕಿ ಕೂಡ ಆಗಿರುವ ಅವರು ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಜತೆಗೆ ರಾಷ್ಟ್ರೀಯ ಮಟ್ಟದ ಮಾಜಿ ಫುಟ್ಬಾಲ್ ಆಟಗಾರ್ತಿಯೂ ಹೌದು.
ನಂದಿತಾ ಬೇಗ್ ಹಾಗೂ ಪ್ರಿಯಾಂಕಾ ಗಾಂಧಿ ದೀರ್ಘ ಕಾಲದ ಸ್ನೇಹಿತೆಯರು
ಮತ್ತೊಂದೆಡೆ ಅವಿವಾ ತಾಯಿ ನಂದಿತಾ ಬೇಗ್ ಹಾಗೂ ಪ್ರಿಯಾಂಕಾ ಗಾಂಧಿ ದೀರ್ಘ ಕಾಲದ ಸ್ನೇಹಿತೆಯರು. ಮಾತ್ರವಲ್ಲದೇ ಇಂಟೀರಿಯರ್ ಡಿಸೈನರ್ ಆಗಿರುವ ನಂದಿತಾ, ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿ ಇಂದಿರಾ ಭವನದ ವಿನ್ಯಾಸದಲ್ಲಿಯೂ ಭಾಗಿಯಾಗಿದ್ದರು.

