ಸಾರಾಂಶ
ಹೌರಾ ಟಿಎಂಸಿ ಅಭ್ಯರ್ಥಿ ಘೋಷಣೆಗೆ ಮಮತಾ ಸೋದರ ಬಾಬುನ್ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಮಮತಾರಿಂದ ಸಂಬಂಧ ಕಡಿತ ಘೋಷಣೆಯಾಗಿದೆ.
ಪಿಟಿಐ ಕೋಲ್ಕತಾ
ತೃಣಮೂಲ ಕಾಂಗ್ರೆಸ್ (ಟಿಎಂಸಿ) ವರಿಷ್ಠೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತಮ್ಮ ಸಹೋದರ ಬಾಬುನ್ ಬ್ಯಾನರ್ಜಿ ಅವರೊಡನೆ ಇರುವ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಘೋಷಿಸಿದ್ದಾರೆ.ರಾಜ್ಯದ ಹೌರಾ ಲೋಕಸಭಾ ಕ್ಷೇತ್ರಕ್ಕೆ ಪ್ರಸೂನ್ ಬ್ಯಾನರ್ಜಿ ಅವರಿಗೆ ಮತ್ತೆ ಟಿಕೆಟ್ ನಂತರ ಬಾಬುನ್ ಬ್ಯಾನರ್ಜಿ, ಟಿಎಂಸಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಮಮತಾ ಬ್ಯಾನರ್ಜಿ ಈ ನಿರ್ಧಾರ ಕೈಗೊಂಡಿದ್ದಾರೆ.
‘ಪ್ರತಿ ಚುನಾವಣೆಗೂ ಮೊದಲು ಇವನು (ಬಾಬುನ್) ಒಂದು ಸಮಸ್ಯೆ ಹುಟ್ಟುಹಾಕುತ್ತಾನೆ. ನಾನು ಕುಟುಂಬ ರಾಜಕಾರಣ ಹಾಗೂ ದುರಾಸೆಯ ಜನರನ್ನು ನಾನು ಇಷ್ಟಪಡುವುದಿಲ್ಲ. ಅವನ ಜತೆಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು.ಬಾಬುನ್ ಬಿಜೆಪಿಗೆ ಸೇರಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಬಾಬುನ್‌ಗೆ ಅನಿಸಿದ್ದನ್ನು ಮಾಡಬಹುದು, ಟಿಎಂಸಿ ತನ್ನ ಅಧಿಕೃತ ಅಭ್ಯರ್ಥಿ ಘೋಷಣೆಗೆ ಬದ್ಧವಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದರು.
ಸದ್ಯ ದೆಹಲಿಯಲ್ಲಿರುವ ಬಾಬುನ್ ಬ್ಯಾನರ್ಜಿ, ತಾವು ಬಿಜೆಪಿ ಸೇರುವ ವದಂತಿಯನ್ನು ಅಲ್ಲಗಳೆದಿದ್ದಾರೆ. ಆದರೆ ಲೋಕಸಭಾ ಚುನಾವಣೆಗೆ ಹೌರಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.