ಸಾರಾಂಶ
ನನ್ನನ್ನು ಆ ದೇವರೇ ಕಳುಹಿಸಿದ್ದಾನೆ. ನಾನು ದೇವರ ಮಗ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು ಸೋಲಿನ ಭಯ ಎದುರಿಸುತ್ತಿರುವವರು, ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಕುಟುಕಿದ್ದಾರೆ.
ಕೊಲ್ಕತಾ: ನನ್ನನ್ನು ಆ ದೇವರೇ ಕಳುಹಿಸಿದ್ದಾನೆ. ನಾನು ದೇವರ ಮಗ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗೆ ಪಶ್ಚಿಮ ಬಂಗಾಳ ಸಿಎಂ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು, ‘ಚುನಾವಣೆ ಸೋಲಿನ ಭಯ ಎದುರಿಸುತ್ತಿರುವವರು, ಈ ರೀತಿಯಾಗಿ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಮೋದಿ ಹೆಸರು ಹೇಳದೆಯೇ ಕುಟುಕಿದ್ದಾರೆ.
ಮಥುರಾಪುರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಅವರು ಇದೀಗ ತಮ್ಮನ್ನು ತಾವು ದೇವರಮಗ ಎಂದು ಕರೆದುಕೊಳ್ಳುತ್ತಿದ್ದಾರೆ. ನಮ್ಮ ರೀತಿಯಲ್ಲ. ಅವರು ಜೈವಿಕ ತಂದೆ ತಾಯಿಯನ್ನು ಹೊಂದಿಲ್ಲ ಎಂದು ಹೇಳುತ್ತಾರೆ. ಅವರನ್ನು ದೇವರು ಕಳುಹಿಸಿದ್ದಾರೆಂದು ಹೇಳುತ್ತಾರೆ.
ಆದರೆ ದೇವರು ಯಾರನ್ನಾದರೂ ಗಲಭೆ ನಡೆಸಲು, ಜಾಹೀರಾತುಗಳ ಮೂಲಕ ಸುಳ್ಳನ್ನು ಹರಡಲು, ಎನ್‌ಆರ್‌ಸಿ ಮೂಲಕ ಜೈಲಿಗೆ ಹಾಕಲು ಕಳುಹಿಸುತ್ತಾರಾ?’ ಪ್ರಶ್ನಿಸಿದರು.
‘ಸಿಎಎ ಹೆಸರಲ್ಲಿ ಗೂಂಡಾಗಿರಿಯನ್ನು ಪ್ರಾಯೋಜಿಸಲು ದೇವರು ಕಳುಹಿಸುತ್ತಾರೆಯೇ?100 ದಿನದ ಕೆಲಸಕ್ಕೆ ಹಣವನ್ನು ನಿಲ್ಲಿಸಲು, ಗ್ರಾಮೀಣ ಭಾಗದ ಮನೆಗಳನ್ನು ತಡೆಯಲು ಕಳುಹಿಸುತ್ತಾನೆಯೆ?ಜನರ ಖಾತೆಗೆ 15 ಲಕ್ಷ ಹಣ ನೀಡುವ ಭರವಸೆಯಿಂದ ದೇವರು ಹಿಂದೆ ಸರಿಯುತ್ತಾರೆಯೇ? ದೇವರು ಅಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ’ಎಂದು ವ್ಯಂಗ್ಯವಾಡಿದ್ದಾರೆ.