ಸಾರಾಂಶ
ನವದೆಹಲಿ : ‘2047ರೊಳಗೆ ದೇಶವನ್ನು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಮಾಡಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಹೆಬ್ಬಯಕೆ. ಜನರ ಜತೆ ನೇರ ಸಂಪರ್ಕ ಹೊಂದಿರುವ ಕಾರಣ ರಾಜ್ಯಗಳೂ ಈ ಗುರಿ ಈಡೇರಿಕೆಗೆ ಸಕ್ರಿಯ ಪಾತ್ರ ನಿರ್ವಹಿಸಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ‘ಈಗಾಗಲೇ ಕೆಲವು ರಾಜ್ಯಗಳು ‘ಶೂನ್ಯ ಬಡತನ’ ಕಲ್ಪನೆಯೊಂದಿಗೆ ಬಡತನ ನಿರ್ಮೂಲನಾ ಆಂದೋಲನ ಹಮ್ಮಿಕೊಂಡಿದ್ದು, ಇದನ್ನು ಗ್ರಾಮ ಮಟ್ಟದಲ್ಲೇ ನಡೆಸಬೇಕು ಹಾಗೂ ಮೌಲ್ಯಮಾಪನದ ನಂತರ ‘ಶೂನ್ಯ ಬಡತನ ಗ್ರಾಮ’ ಎಂದು ಘೋಷಿಸಬೇಕು’ ಎಂದು ಕರೆ ನೀಡಿದ್ದಾರೆ.
ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಹಾಗೂ ಉಪಾಧ್ಯಕ್ಷ ಸುಮನ್ ಬೆರಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಮೋದಿ ಅವರ ಭಾಷಣದ ಅಂಶಗಳನ್ನು ವಿವರಿಸಿದರು ಹಾಗೂ ‘ಭಾರತವನ್ನು 2047ರಲ್ಲಿ ವಿಕಸಿತ ದೇಶವನ್ನಾಗಿಸುವ ಬಗ್ಗೆ, ಜನಸಂಖ್ಯಾ ನಿರ್ವಹಣೆ ಬಗ್ಗೆ ಮತ್ತು ಶೂನ್ಯ ಬಡತನದ ಪರಿಕಲ್ಪನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದರು.‘ವಿದೇಶೀ ನೇರ ಬಂಡವಾಳ ಹೂಡಿಕೆ ಬಗ್ಗೆ ರಾಜ್ಯ-ರಾಜ್ಯಗಳ ನಡುವೆಯೇ ಸ್ಪರ್ಧೆ ಏರ್ಪಡಬೇಕು ಎಂಬುದು ಮೋದಿ ಬಯಸಿದರು. ಇದರಿಂದಾಗಿ ಹೂಡಿಕೆಗಳು ಎಲ್ಲಾ ರಾಜ್ಯಗಳಿಗೆ ತಲುಪಬಹುದು. ಅದರಲ್ಲೂ ವಿಶೇಷವಾಗಿ ಕಮ್ಮಿ ಪ್ರಮಾಣದಲ್ಲಿ ಅಭಿವೃದ್ಧಿಯಲ್ಲಿ ಯಶ ಕಂಡಿರುವ ರಾಜ್ಯಗಳಿಗೂ ತಲುಪಬಹುದು ಎಂದು ಅಭಿಪ್ರಾಯಪಟ್ಟರು’ ಎಂದು ಬೆರಿ ಹೇಳಿದರು.‘
ರಾಜ್ಯಗಳು ಜಿಲ್ಲೆಗಳಿಗೆ ಹೆಚ್ಚು ಖರ್ಚು ಮಾಡಬೇಕೆಂದು ಪ್ರಧಾನಿ ಬಯಸುತ್ತಾರೆ, ಇದರಿಂದ ಜಿಲ್ಲೆಗಳು ಅಭಿವೃದ್ಧಿಯ ಚಾಲಕ ಎಂಬ ಹಣೆಪಟ್ಟಿ ಕೀರ್ತಿಗೆ ಪಾತ್ರವಾಗಲಿವೆ ಎಂದೂ ಅವರು ಅಭಿಪ್ರಾಯಪಟ್ಟರು’ ಎಂದು ಸುಬ್ರಹ್ಮಣ್ಯಂ ಹೇಳಿದರು.‘ಈ ದಶಕ ತಾಂತ್ರಿಕ ಹಾಗೂ ಭೌಗೋಳಿಕ ರಾಜಕೀಯ ಬದಲಾವಣೆಗಳಿಂದ ಕೂಡಿರುತ್ತದೆ. ಜತೆಗೆ ಅವಕಾಶಗಳನ್ನೂ ಇಟ್ಟುಕೊಂಡಿರುತ್ತದೆ. ಈ ಅವಕಾಶಗಳನ್ನು ಭಾರತ ಕಬಳಿಸಬೇಕು. ಅಂತಾರಾಷ್ಟ್ರೀಯ ಹೂಡಿಕೆಗೆ ನಮ್ಮ ನೀತಿಗಳು ಪೂರಕವಾಗಿರುವಂತೆ ಮಾಡಬೇಕು. ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವತ್ತ ಪ್ರಗತಿ ಸಾಧಿಸಲು ಇದು ಮೆಟ್ಟಿಲಾಗಬೇಕು ಎಂದು ಮೋದಿ ತಿಳಿಸಿದರು’ ಎಂದೂ ಆಯೋಗದ ಅಧಿಕಾರಿಗಳು ಹೇಳಿದರು.
ಸಿದ್ದು ಸೇರಿ ಹತ್ತು ಸಿಎಂಗಳು ಗೈರು
ನೀತಿ ಆಯೋಗದ ಆಡಳಿತ ಮಂಡಳಿ ಸಭೆಗೆ ಕೇಂದ್ರ ಬಜೆಟ್ ತಾರತಮ್ಯ ವಿರೋಧಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ 10 ಪ್ರತಿಪಕ್ಷ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಬಹಿಷ್ಕಾರ ಹಾಕಿದ್ದರು. ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರೂ, ಪ್ರತಿಭಟಿಸಿ ಅರ್ಧಕ್ಕೇ ಸಭಾತ್ಯಾಗ ಮಾಡಿದರು.
ನೀತಿ ಆಯೋಗದ ಸಭೆಯಲ್ಲಿ ಹೈಡ್ರಾಮಾ
ನವದೆಹಲಿ : 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ನೀತಿ ಆಯೋಗದ ಸಭೆ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
ಪ್ರತಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ದ ಮುಖ್ಯಮಂತ್ರಿಗಳು ಈ ಸಭೆಯಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದರೂ ಅದೇ ಕೂಟದಲ್ಲಿ ಗುರುತಿಸಿಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಗೆ ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದರು. ಆದರೆ ಸಭೆಯಲ್ಲಿ ತಮಗೆ ಮಾತನಾಡಲು ಅವಕಾಶ ಸಿಗಲಿಲ್ಲ, ಮೈಕ್ ಆಫ್ ಮಾಡಿದರು ಎಂದು ದೂರಿ ಸಭೆಯಿಂದ ಮಧ್ಯದಲ್ಲೇ ಹೊರ ನಡೆದರು.ಈ ನಡುವೆ, ಈ ವಿಚಾರ ಪ್ರತಿಪಕ್ಷಗಳು ಹಾಗೂ ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಒಬ್ಬ ಮುಖ್ಯಮಂತ್ರಿಯನ್ನು ಈ ರೀತಿ ನಡೆಸಿಕೊಂಡಿದ್ದು ಸರಿಯಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಿಡಿಕಾರಿದ್ದರೆ, ಪ್ರತಿಪಕ್ಷಗಳ ಧ್ವನಿಯನ್ನು ಯಾವ ರೀತಿ ಹತ್ತಿಕ್ಕಲಾಗುತ್ತಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಮಮತಾ ಅವರ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಮತ್ತೊಂದೆಡೆ, ರಾಜಕೀಯ ಲಾಭಕ್ಕಾಗಿ ಮಮತಾ ಅವರು ಡ್ರಾಮಾ ಮಾಡಿದ್ದಾರೆ ಎಂದು ಬಿಜೆಪಿ ಮೂದಲಿಸಿದೆ. ಏತನ್ಮಧ್ಯೆ ಮಮತಾ ಆರೋಪಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.
ವಿಪಕ್ಷ ಸಿಎಂಗಳು ಗೈರು:
ಕೇಂದ್ರ ಬಜೆಟ್‌ನಲ್ಲಿ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ವಿಪಕ್ಷಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದರು. ಆದರೆ ಮಮತಾ ಅವರು ಈ ಸಭೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ವಿಪಕ್ಷಗಳ ಪಾಳಯದಿಂದ ಹಾಜರಾದ ಏಕೈಕ ಸಿಎಂ ಅವರಾಗಿದ್ದರು.
ಸಭೆ ಆರಂಭವಾದ ಕೆಲ ಹೊತ್ತಿನ ಬಳಿಕ ಹೊರ ಬಂದ ಮಮತಾ ಅವರು, ನಾನು ಈ ಸಭೆಯನ್ನು ಬಹಿಷ್ಕರಿಸುತ್ತಿದ್ದೇನೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ 20 ನಿಮಿಷ ಮಾತನಾಡಲು ಅವಕಾಶ ಕೊಟ್ಟರು. ಅಸ್ಸಾಂ, ಗೋವಾ, ಛತ್ತೀಸ್‌ಗಢ ಸಿಎಂಗಳು 10-12 ನಿಮಿಷ ಮಾತನಾಡಿದರು. ಆದರೆ ನಾನು ಮಾತನಾಲು ಆರಂಭಿಸಿದ ಐದೇ ನಿಮಿಷಕ್ಕೇ ತಡೆದರು. ಐದು ನಿಮಿಷಗಳಾಗುತ್ತಿದ್ದಂತೆ ಮೈಕ್ ಆಫ್ ಮಾಡಿದರು. ಇದು ನ್ಯಾಯಯುತವಾದ ಕ್ರಮವಲ್ಲ. ಅಪಮಾನಕಾರಿ. ಇನ್ನು ಮುಂದೆ ಯಾವುದೇ ಸಭೆಗೂ ಹಾಜರಾಗುವುದಿಲ್ಲ ಎಂದು ಸುದ್ದಿಗಾರರೆದುರು ಆಕ್ರೋಶ ವ್ಯಕ್ತಪಡಿಸಿದರು.ಮಮತಾ ಅವರು ಸಮಯ ಮೀರಿದ ಬಳಿಕವೂ ಮಾತನಾಡಿದ್ದಾರೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ನಡುವೆ, ಪಿಐಬಿ ಸತ್ಯಶೋಧನೆ ವಿಭಾಗ ಕೂಡ ಮಮತಾ ಸುಳ್ಳು ಹೇಳಿದ್ದಾರೆ ಎಂದು ಟೀಕಿಸಿದೆ.
ಮೂಲಗಳ ಪ್ರಕಾರ, ಹೆಸರಿನ ಮೊದಲ ಅಕ್ಷರಕ್ಕೆ ಅನುಗುಣವಾಗಿ ಮುಖ್ಯಮಂತ್ರಿಗಳು ಸರದಿಯಲ್ಲಿ ಮಾತನಾಡಬೇಕಿತ್ತು. ಹಾಗೆ ನೋಡಿದರೆ ಮಮತಾ ಅವರು ಮಧ್ಯಾಹ್ನ ಊಟದ ಬಳಿಕ ಮಾತನಾಡಬೇಕಿತ್ತು. ಆದರೆ ಅವರು ಬೇಗ ಕೋಲ್ಕತಾಗೆ ತೆರಳಬೇಕು ಎಂದು ಬಂಗಾಳ ಸರ್ಕಾರದಿಂದ ಕೋರಿಕೆ ಬಂದ ಕಾರಣ 7ನೆಯವರಾಗಿ ಮಾತನಾಡಲು ಅವಕಾಶ ಕೊಡಲಾಯಿತು ಎನ್ನಲಾಗಿದೆ.