ಸಾರಾಂಶ
ಕೋಲ್ಕತಾ: ಪ.ಬಂಗಾಳದ ಸಂದೇಶ್‌ಖಾಲಿಯಲ್ಲಿ ಟಿಎಂಸಿ ಕಾರ್ಯಕರ್ತರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಪ್ರಕ್ಷುಬ್ಧ ಸಂದೇಶ್‌ಖಾಲಿಯಲ್ಲಿ ಬಿಜೆಪಿ ತನ್ನ ಪಿತೂರಿಯಿಂದ ಮತ್ತಷ್ಟು ತೊಂದರೆಯನ್ನುಂಟು ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಅಲ್ಲದೆ, ಅನೇಕ ವರ್ಷಗಳಿಂದ ಸಂದೇಶ್‌ಖಾಲಿ ಆರೆಸ್ಸೆಸ್ ನೆಲೆ ಎಂದೂ ಹೇಳಿದ್ದಾರೆ.
ಅಲ್ಲದೇ ‘ಸಂದೇಶ್‌ಖಾಲಿಯಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 17 ಜನರನ್ನು ಬಂಧಿಸಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ.
ಸಂದೇಶ್‌ಖಾಲಿಯಲ್ಲಿ ಶಾಂತಿ ಮರುಸ್ಥಾಪನೆಗೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ನಾನು ಎಂದಿಗೂ ಯರಿಗೂ ಅನ್ಯಾಯವಾಗಲು ಅವಕಾಶ ನೀಡಿಲ್ಲ.
ರಾಜ್ಯ ಮಹಿಳಾ ಆಯೋಗವನ್ನು ಸಂದೇಶ್‌ಖಾಲಿಗೆ ಕಳುಹಿಸಿ ಅಲ್ಲಿ ಪೊಲೀಸ್ ತಂಡ ರಚಿಸಿದ್ದೇನೆ’ ಎಂದು ಹೇಳಿದ್ದಾರೆ. ಇದೇ ವೇಳೆ ಸಂದೇಶ್‌ಖಾಲಿಗೆ ಹೊರಟಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಗುರುವಾರ ಪೊಲೀಸರು ತಡೆದಿದ್ದಾರೆ.
ಸುವೇಂದು ಅವರ ವಾಹನವನ್ನು ರಾಂಪುರ ಗ್ರಾಮದಲ್ಲಿ ಪೊಲೀಸರು ತಡೆಹಿಡಿದರು. ಇನ್ನು ತಮ್ಮನ್ನು ತಡೆದರೆ ಅದರ ವಿರುದ್ಧ ಕೋರ್ಟ್ಗೆ ಹೋಗುವುದಾಗಿ ಸುವೇಂದು ತಿಳಿಸಿದ್ದರು.
ಪಡಿತರ ಹಗರಣಕ್ಕೆ ಸಂಬಂಧಿಸಿ ಇ.ಡಿ. ದಾಳಿಗೆ ಒಳಗಾಗಿದ್ದ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಆತನ ಬೆಂಬಲಿಗರು 24 ಪರಗಣ ಜಿಲ್ಲೆಯಲ್ಲಿರುವ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅಲ್ಲಿನ ಮಹಿಳೆಯರು ಕಳೆದ ಕೆಲ ದಿನಗಳಿಂದ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.