ಕೇಂದ್ರದ ಅನುದಾನ ವಿಳಂಬ ಖಂಡಿಸಿ ಮಮತಾ ಧರಣಿ

| Published : Feb 03 2024, 01:49 AM IST / Updated: Feb 03 2024, 07:46 AM IST

ಸಾರಾಂಶ

ಕೇಂದ್ರ ಸರ್ಕಾರ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಮಮತಾ ಬ್ಯಾನರ್ಜಿ ಧರಣಿ ನಡೆಸಿದರು.

ಕೋಲ್ಕತಾ: ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಬಾಕಿ ಉಳಿಸಿಕೊಂಡಿರುವ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ನಗರದ ಹೃದಯ ಭಾಗದಲ್ಲಿರುವ ಮೈದಾನ ಪ್ರದೇಶದಲ್ಲಿ ಧರಣಿ ನಡೆಸಿದ ಮಮತಾ, ‘ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಆವಾಸ್‌ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಈ ಹಿನ್ನೆಲೆಯಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ನಮಿಸಿ ಧರಣಿ ಆರಂಭಿಸಿದ್ದು, ಇಲ್ಲಿಂದಲೇ ಆಡಳಿತವನ್ನೂ ನಿರ್ವಹಿಸುತ್ತೇನೆ’ ಎಂದರು. 

ಅಲ್ಲದೆ, ‘ಕೇಂದ್ರ ಸರ್ಕಾರದ್ದು ಮಧ್ಯಂತರ ಬಜೆಟ್‌ ಅಲ್ಲ. ಇದು ಅಂತಿಮ ಬಜೆಟ್‌’ ಎಂದೂ ಕುಟುಕಿದರು.ಇದೇ ರೀತಿ ಕಳೆದ ವರ್ಷವೂ ಸಹ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ಅನುದಾನ ಬಾಕಿ ಉಳಿಸಿಕೊಂಡಿರುವ ಸಂಬಂಧ ಧರಣಿ ನಡೆಸಿದ್ದರು.