ಕುಟುಂಬದ 8 ಮಂದಿ ಹತ್ಯೆ ಮಾಡಿ ತಾನು ನೇಣಿಗೆ ಶರಣು

| Published : May 30 2024, 12:49 AM IST / Updated: May 30 2024, 06:19 AM IST

ಸಾರಾಂಶ

ನೇಪಾಳದ ರಾಜಮನೆತನದಲ್ಲಿ ತನ್ನ ಕುಟುಂಬಸ್ಥರನ್ನು ಹತ್ಯೆ ಮಾಡಿ ತಾನೂ ಗುಂಡಿಕ್ಕಿ ಸತ್ತ ಘಟನೆ ನೆನಪಿಸುವಂತಹ ದೃಶ್ಯ ಮಧ್ಯಪ್ರದೇಶದಲ್ಲಿ ನಡೆದಿದೆ.

ಛಿಂದ್ವಾಡಾ(ಮ.ಪ್ರ): ನೇಪಾಳದ ರಾಜಮನೆತನದಲ್ಲಿ ತನ್ನ ಕುಟುಂಬಸ್ಥರನ್ನು ಹತ್ಯೆ ಮಾಡಿ ತಾನೂ ಗುಂಡಿಕ್ಕಿ ಸತ್ತ ಘಟನೆ ನೆನಪಿಸುವಂತಹ ದೃಶ್ಯ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಕೂಡು ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಹತ್ಯೆಗೈದು ಬಳೀಕ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಮಧ್ಯಪ್ರದೇಶದ ಛಿಂದ್ವಾಡದ ಬೋದಲ್‌ ಕಚ್ಚರ್‌ ಗ್ರಾಮದಲ್ಲಿ ನಡೆದಿದೆ.

ಬುಧವಾರ ಮುಂಜಾನೆ 2:30ಕ್ಕೆ ದಿನೇಶ್‌ ಸರಿಯಾಮ್‌ ಎಂಬ ವ್ಯಕ್ತಿ ತನ್ನ ಪತ್ನಿ, ತಾಯಿ, ಸೋದರರು, ಅತ್ತಿಗೆ ಮತ್ತು ಮೂರು ಮಕ್ಕಳನ್ನು ಕೊಡಲಿಯಿಂದ ಹತ್ಯೆಗೈದಿದ್ದಾನೆ. ಬಳಿಕ ಸೋದರಳಿಯನನ್ನು ಹತ್ಯೆ ಮಾಡುವಾಗ ಆತ ತಪ್ಪಿಸಿಕೊಂಡು ಓಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಕೊಲೆ ಮಾಡಿದ ವ್ಯಕ್ತಿಯ ಹತ್ತಿರದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ದಿನೇಶ್ ಸರಿಯಾಮ್‌ ಮೇ 21ರಂದು ವಿವಾಹವಾಗಿದ್ದು, ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಈ ರೀತಿ ಕೃತ್ಯ ಎಸಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

2001ರಲ್ಲಿ ನೇಪಾಳದ ರಾಜಮನೆತನದ ಮುಂದಿನ ರಾಜ ಎಂದು ಘೋಷಿಸಿದ್ದ ದೀಪೇಂದ್ರ ರಾಜ ಮತ್ತು ರಾಣಿಯರೂ ಸೇರಿದಂತೆ 8 ಕುಟುಂಬಸ್ಥರನ್ನು ಕೊಂದು ತಾನೂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.