ಸಾರಾಂಶ
ಇಂಫಾಲ: ಕಳೆದ 2 ವರ್ಷಗಳಿಂದ ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ಮಣಿಪುರದಲ್ಲಿ ಭಾನುವಾರ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಹುದ್ದೆಗೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಮಣಿಪುರ ಹಿಂಸಾಚಾರಕ್ಕೆ ಸ್ವತಃ ಸಿಎಂ ಬಿರೇನ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾದ ಆಡಿಯೋದ ಸಾಚಾತನದ ಬಗ್ಗೆ ಸುಪ್ರೀಂಕೋರ್ಟ್ ವರದಿ ಕೇಳಿದ ಮತ್ತು ವಿಧಾನಸಭೆಯಲ್ಲಿ ವಿಪಕ್ಷಗಳು ಬಿರೇನ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ನಡುವೆ ಸಿಎಂ ರಾಜೀನಾಮೆ ಹಿನ್ನೆಲೆಯಲ್ಲಿ ಸೋಮವಾರದಿಂದ ನಡೆಯಬೇಕಿದ್ದ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ರದ್ದು ಮಾಡಲಾಗಿದೆ.ಈ ನಡುವೆ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಸಿಎಂ ನಿರ್ಧಾರ ತಡವಾಗಿದೆ. ಮಣಿಪುರದ ಜನರು ಈಗ ಹಾರುವ ಪ್ರಧಾನಿ ಭೇಟಿಯಾಗಿ ಕಾಯುತ್ತಿದ್ದಾರೆ’ ಎಂದು ಲೇವಡಿ ಮಾಡಿದೆ.
ರಾಜೀನಾಮೆ:
ಭಾನುವಾರ ಸಂಜೆ ರಾಜ್ಯಪಾಲರ ಭವನಕ್ಕೆ ತೆರಳಿದ ಮುಖ್ಯಮಂತ್ರಿ ಬಿರೇನ್ ಸಿಂಗ್, ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ರಾಜೀನಾಮೆಗೆ ಸಂಬಂಧಿಸಿದಂತೆ ಸುದೀರ್ಘವಾಗಿ ಪತ್ರ ಬರೆದಿದ್ದು, ಅದರಲ್ಲಿ ಕೇಂದ್ರಕ್ಕೆ ಧನ್ಯವಾದ ಸಲ್ಲಿಸಿ ರಾಜ್ಯದ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳನ್ನಿಟ್ಟಿದ್ದಾರೆ.
ರಾಜೀನಾಮೆ ಪತ್ರದಲ್ಲೇನಿದೆ?
‘ಇಲ್ಲಿಯವರೆಗೆ ಮಣಿಪುರದ ಜನರಿಗೆ ಸೇವೆ ಸಲ್ಲಿಸಿರುವುದು ಗೌರವದ ಸಂಗತಿ. ಮಣಿಪುರ ಜನರ ಹಿತಾಸಕ್ತಿಗಳನ್ನು ಕಾಪಾಡಲು ಸಮಯೋಚಿತ ಕ್ರಮಗಳು, ಮಧ್ಯಸ್ಥಿಕೆ, ಅಭಿವೃದ್ಧಿ, ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಕೇಂದ್ರಕ್ಕೆ ಕೃತಜ್ಞನಾಗಿದ್ದೇನೆ. ನನ್ನ ರಾಜೀನಾಮೆಯ ಬಳಿಕವೂ ಅದೇ ರೀತಿ ಸಹಕಾರ ಮುಂದುವರಿಯಲಿ. ಸಾವಿರಾರು ವರ್ಷಗಳಿಂದ ಶ್ರೀಮಂತ , ವೈವಿಧ್ಯಮ ನಾಗರಿಕತೆ ಹೊಂದಿರುವ ಮಣಿಪುರದ ಪ್ರಾದೇಶಿಕ ಸಮಗ್ರತೆ ಕಾಪಾಡಿ. ಗಡಿ ಒಳನುಸುಳುವಿಕೆ ವಿರುದ್ಧ ಕಠಿಣ ಕ್ರಮ, ಅಕ್ರಮ ವಲಸಿಗರ ಗಡೀಪಾರು, ಮಾದಕ ವ್ಯಸನ ಮತ್ತು ನಾರ್ಕೋ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ನೀತಿ ರೂಪಿಸಿ’ ಎಂದು ಮನವಿ ಮಾಡಿದ್ದಾರೆ.
ಸುಪ್ರೀಂ ಭೀತಿ:
ಇತ್ತೀಚೆಗೆ ಸೋರಿಕೆಯಾದ ಆಡಿಯೋವೊಂದರಲ್ಲಿ ‘ಮೈತೇಯಿ ಸಮುದಾಯದ ಜನರಿಗೆ ಠಾಣೆಗಳಿಂದ ಶಸ್ತ್ರಾಸ್ತ್ರ ಲೂಟಿಗೆ ತಾವು ಅವಕಾಶ ಮಾಡಿಕೊಟ್ಟ ಮತ್ತು ಅವರ ಬಂಧನಕ್ಕೆ ತಡೆ ನೀಡಿದ್ದಾಗಿ ವ್ಯಕ್ತಿಯೊಬ್ಬರು ಮಾತನಾಡಿದ್ದ ಅಂಶಗಳಿತ್ತು. ಈ ಧ್ವನಿ ಸ್ವತಃ ಬಿರೇನ್ ಅವರದ್ದೇ ಎಂದು ಕುಕಿ ಸಮುದಾಯದ ಸುಪ್ರೀಂ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಆಡಿಯೋದ ಸಾಚಾತನದ ಬಗ್ಗೆ ಎಫ್‌ಎಸ್‌ಎಲ್‌ನಿಂದ ಕೋರ್ಟ್ ವರದಿ ಕೇಳಿತ್ತು. ಎಫ್‌ಎಸ್‌ಎಲ್ ಕೂಡಾ 2 ದಿನಗಳ ಹಿಂದೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಒಂದು ವೇಳೆ ಆಡಿಯೋದಲ್ಲಿರುವುದು ಬಿರೇನ್ ಧ್ವನಿಯೇ ಎಂದಾದಲ್ಲಿ ಬಿಜೆಪಿಗೆ ಭಾರೀ ಮುಜುಗರ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಿರೇನ್ ರಾಜೀನಾಮೆ ಪಡೆಯಲಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ ವಿಪಕ್ಷಗಳು, ಸೋಮವಾರದಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದವು. ಇದರ ಜೊತೆಗೆ ಬಿಜೆಪಿಯೊಳಗೇ ಬಿರೇನ್ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದ ಕೇಂದ್ರ ನಾಯಕರು ಬಿರೇನ್ ರಾಜೀನಾಮೆ ಪಡೆದಿದ್ದಾರೆ ಎನ್ನಲಾಗಿದೆ.
200 ಬಲಿ:
ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ 2 ವರ್ಷಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. 50000ಕ್ಕೂ ಹೆಚ್ಚು ಜನರು ತಮ್ಮ ಮನೆ ತೊರೆದಿದ್ದಾರೆ.
ಬಾಕ್ಸ್ ರಾಜೀನಾಮೆ ಏಕೆ?-ಬಿರೇನ್ ಆಡಳಿತದ ಬಗ್ಗೆ ಬಿಜೆಪಿ ಶಾಸಕರಲ್ಲೇ ಅಸಮಾಧಾನ. ನಾಯಕತ್ವ ಬದಲಾವಣೆಗೆ ಒತ್ತಡ-ವಿಪಕ್ಷ ಕಾಂಗ್ರೆಸ್‌ನಿಂದ ಅವಿಶ್ವಾಸ ಮಂಡನೆಗೆ ಯತ್ನ-ಸ್ವಪಕ್ಷೀಯಕರು ಅವಿಶ್ವಾಸದಲ್ಲಿ ಕೈ ಜೋಡಿಸುತ್ತಾರೆಂಬ ಶಂಕೆ -ಜತೆಗೆ ಹಿಂಸೆಗೆ ಸಿಎಂ ಕುಮ್ಮಕ್ಕು ನೀಡಿದ ಆಡಿಯೋ ಕೇಸ್ ಸುಪ್ರೀಂ ತನಿಖೆ ಭೀತಿಯಿಂದ ರಾಜೀನಾಮೆ