ಇತಿಹಾಸ ದಯೆ ತೋರಲಿದೆ ಎಂಬ ಮನಮೋಹನ್‌ ಮಾತು ನಿಜವಾಗಿತ್ತು : ಮಾಜಿ ಪ್ರಧಾನಿ ಕುರಿತ ಇಂಟರೆಸ್ಟಿಂಗ್ ಸಂಗತಿಗಳು

| Published : Dec 27 2024, 08:52 AM IST

Dr Manmohan Singh
ಇತಿಹಾಸ ದಯೆ ತೋರಲಿದೆ ಎಂಬ ಮನಮೋಹನ್‌ ಮಾತು ನಿಜವಾಗಿತ್ತು : ಮಾಜಿ ಪ್ರಧಾನಿ ಕುರಿತ ಇಂಟರೆಸ್ಟಿಂಗ್ ಸಂಗತಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ನನ್ನನ್ನು ನಾನು ದುರ್ಬಲ ಎಂದು ನಂಬುವುದಿಲ್ಲ. ಇತಿಹಾಸ ನನ್ನ ಮೇಲೆ ದಯ ತೋರಲಿದೆ ಎಂಬ ಎಂಬ ಮಾಜಿ ಪ್ರಧಾನಿ ಮನಮೋಹನ್‌ ಅವರ ಮಾತುಗಳು ಅವರ ಜೀವಿತಾವಧಿಯಲ್ಲೇ ನಿಜವಾಗಿತ್ತು

ಇತಿಹಾಸ ದಯೆ ತೋರಲಿದೆ ಎಂಬ ಮನಮೋಹನ್‌ ಮಾತು ನಿಜವಾಗಿತ್ತು

ನನ್ನನ್ನು ನಾನು ದುರ್ಬಲ ಎಂದು ನಂಬುವುದಿಲ್ಲ. ಇತಿಹಾಸ ನನ್ನ ಮೇಲೆ ದಯ ತೋರಲಿದೆ ಎಂಬ ಎಂಬ ಮಾಜಿ ಪ್ರಧಾನಿ ಮನಮೋಹನ್‌ ಅವರ ಮಾತುಗಳು ಅವರ ಜೀವಿತಾವಧಿಯಲ್ಲೇ ನಿಜವಾಗಿತ್ತು. 10 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದ ಅವಧಿಯಲ್ಲಿ ಅವರು ಕೈಗೊಂಡ ಕ್ರಮಗಳು, ಜಾರಿಗೊಳಿಸಿದ ನೀತಿಗಳು ದೇಶದ ಪಾಲಿಗೆ ಎಷ್ಟು ಅನಿವಾರ್ಯ ಮತ್ತು ಅಮೂಲ್ಯವಾಗಿತ್ತು ಎಂಬುದನ್ನು ಅವರ ನಂತರ ಅಧಿಕಾರಕ್ಕೆ ಬಂದ ಪಕ್ಷಗಳು, ಸರ್ಕಾರಗಳು ಕೂಡಾ ಒಪ್ಪಿದ್ದವು.

ಸಿಂಗ್‌ ಅವರು ವಿತ್ತ ಸಚಿವರ ಹುದ್ದೆಗೇರಿದಾಗ, ದೇಶ ವಿತ್ತೀಯ ಕೊರತೆ, ಪಾವತಿಯ ಸಮತೋಲನ ಕೊರತೆ, ವಿದೇಶಿ ವಿನಿಮಯ ಮೀಸಲು ಕೊರತೆಗಳಂತಹ ಸಮಸ್ಯೆಗಳಲ್ಲಿ ಮುಳುಗಿತ್ತು. ಆದರೆ, ತಾವು ಅಧಿಕಾರದಲ್ಲಿದ್ದ 1991-1996 ಅವಧಿಯಲ್ಲಿ ಅವರು ಸಾರ್ವಜನಿಕ ಉದ್ಯಮಗಳ ಖಾಸಗೀಕರಣ, ಉದಾರೀಕರಣದಂತಹ ಕಾರ್ಯಕ್ರಮಗಳನ್ನು ಪರಿಚಯಿಸಿದರು. ಇದರಿಂದ ದೇಶ ಆರ್ಥಿಕವಾಗಿ ಚೇತರಿಕೆ ಕಂಡಿತ್ತು. ಅದರ ಪರಿಣಾಮ ಮತ್ತೆಂದೂ ದೇಶ ಆರ್ಥಿಕವಾಗಿ ಹಿನ್ನಡೆ ಅನುಭವಿಸಲಿಲ್ಲ. ಅವರು ಅಂದು ಹಾಕಿದ ಅಡಿಪಾಯದ ಪರಿಣಾಮ ಭಾರತ ವಿಶ್ವದ ಅತಿವೇಗದ ಆರ್ಥಿಕತೆಯಾಗಿ ಬೆಳವಣಿಗೆ ಹೊಂದುವುದು ಸಾಧ್ಯವಾಯಿತು.

ಸಿಂಗ್‌ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿಯೂ ಗೌರವಕ್ಕೆ ಪಾತ್ರರಾಗಿದ್ದರು. ಇದಕ್ಕೆ ಉದಾಹರಣೆಯೆಂದರೆ, ‘ಸಿಂಗ್‌ರೊಂದಿಗೆ ಕೆಲಸ ಮಾಡುವುದು ನನಗಿಷ್ಟ. ನಾನು ನನ್ನ ಜೀವನದಲ್ಲಿ ಕೆಲವೇ ಕೆಲವರನ್ನು ಮೆಚ್ಚಿರುವುದು’ ಎಂಬ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾರ ಮಾತು.

ಹುಟ್ಟೂರಿಗೆ ಹೋಗುವ ಆಸೆ ಕೊನೆಗೂ ಈಡೇರಿರಲಿಲ್ಲ

ಪಾಕಿಸ್ತಾನದ ಪಂಜಾಬ್‌ನ ಗಾಹ್‌ನಲ್ಲಿ ಹುಟ್ಟಿದ್ದ ಮನಮೋಹನ್ ಸಿಂಗ್ ಎರಡು ಸಲ ಭಾರತದ ಪ್ರಧಾನಿಯಾಗಿದ್ದರು. ಆದರೆ ಅವರಿಗೆ ಹುಟ್ಟೂರಿಗೆ ಹೋಗಬೇಕು ಮಹಾದಾಸೆ ಇತ್ತಂತೆ. ಅಲ್ಲಿರುವ ನೋವಿನ ನೆನಪುಗಳು ಕಾರಣಕ್ಕೆ ಸಿಂಗ್ ಹಿಂದೇಟು ಹಾಕಿದ್ದಾರೆ. ಆ ಆಸೆ ಕೊನೆಗೂ ಈಡೇರಲಿಲ್ಲ.

‘ಪ್ರತಿಯೊಬ್ಬ ಸಿಖ್‌ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕರ್ತಾರಪುರ ಮತ್ತು ನಂಕಾನಾ ಸಾಹಿಬ್‌ಗೆ ಹೋಗಲು ಬಯಸುತ್ತಾರೆ. ನಾನು ಸಹ ಅಲ್ಲಿಗೆ ಹೋಗಲಿ ಬಯಸುತ್ತೇನೆ. ನಾನು ಒಮ್ಮೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರನ್ನು ಪಾಕಿಸ್ತಾನದಲ್ಲಿರುವ ಚಕ್ವಾಲ್‌ನಲ್ಲಿರುವ ಪೂರ್ವಜನರ ಸ್ಥಳಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಕೇಳಿದ್ದೆ. ಆಗ ಅವರು ನಾನು ಅಲ್ಲಿರುವ ನೋವಿನ ನೆನಪುಗಳ ಕಾರಣಕ್ಕೆ ಹೋಗುವುದಿಲ್ಲ ಎಂದಿದ್ದರು’ ಎಂದು 2019ರಲ್ಲಿ ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್‌ ಸಿಂಗ್ ಬಾದಲ್ ಸಂದರ್ಶನವೊಂದರಲ್ಲಿ ಸಿಂಗ್‌ರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

ಇಂಡೋ-ಪಾಕ್‌ ಕ್ರಿಕೆಟ್‌ ಸಂಬಂಧ ಪುನರ್‌ಸ್ಥಾಪಿಸಿದ ಚಾಣಕ್ಯ ಸಿಂಗ್‌!

ಪಾಕ್‌ ಪ್ರಧಾನಿ ಜತೆ ಕೂತು ಭಾರತ-ಪಾಕ್‌ ಸೆಮಿಫೈನಲ್‌ ವೀಕ್ಷಣೆ

ಆರ್ಥಿಕ ತಜ್ಞರಾಗಿ ಗುರುತಿಸಿಕೊಳ್ಳುವ ಮನಮೋಹನ್‌ ಸಿಂಗ್‌, ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್‌ ಸಂಬಂಧವನ್ನು ಮರುಸ್ಥಾಪಿಸಲು ಪಣತೊಟ್ಟು, ಅದರಲ್ಲಿ ಯಶಸ್ವಿಯೂ ಆದ ಚಾಣಕ್ಯ ಕೂಡಾ ಹೌದು. 2008ರಲ್ಲಿ ಮುಂಬೈ ಉಗ್ರ ದಾಳಿ ಬಳಿಕ ಭಾರತ-ಪಾಕಿಸ್ತಾನ ಕ್ರಿಕೆಟ್‌ ಸಂಬಂಧ ಹಳಸಿತ್ತು. ಇದನ್ನು ಪುನರ್‌ಸ್ಥಾಪಿಸಿದ್ದು ಸಿಂಗ್‌.

2011ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಭಾರತ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿತ್ತು. ಪಾಕ್‌ ತಂಡ ಗುಂಪು ಹಂತ, ಕ್ವಾರ್ಟರ್‌ಫೈನಲ್‌ ಪಂದ್ಯಗಳನ್ನು ಶ್ರೀಲಂಕಾ, ಬಾಂಗ್ಲಾದಲ್ಲಿ ಆಡಿದರೂ, ಭಾರತ ವಿರುದ್ಧ ಸೆಮಿಫೈನಲ್‌ ಪಂದ್ಯ ಆಡಲು ಭಾರತಕ್ಕೆ ಆಗಮಿಸಬೇಕಿತ್ತು.

ಅದು ಕ್ರಿಕೆಟ್‌ ಲೋಕವೇ ಕುತೂಹಲದ ಕಣ್ಣಿನಿಂದ ನೋಡುತ್ತಿದ್ದ ಸಮಯ. ಎಲ್ಲರಲ್ಲೂ ಪಾಕ್‌ ತಂಡ ಭಾರತಕ್ಕೆ ಬರಲಿದೆಯೇ ಎಂಬ ಕೌತುಕ. ಈ ವೇಳೆ ಐತಿಹಾಸಿಕ ಹೆಜ್ಜೆ ಎಂಬಂತೆ ಪ್ರಧಾನಿ ಸಿಂಗ್‌, ಪಾಕಿಸ್ತಾನದ ಪ್ರಧಾನಿ ಯೂಸುಫ್‌ ಗಿಲಾನಿಯನ್ನೇ ಭಾರತಕ್ಕೆ ಆಹ್ವಾನಿಸಿದರು. ಆಹ್ವಾನ ಸ್ವೀಕರಿಸಿ ಯೂಸುಫ್‌ ಭಾರತಕ್ಕೆ ಆಗಮಿಸಿದರು. ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಪಂದ್ಯವನ್ನು ಮನಮೋಹನ್‌ ಸಿಂಗ್‌-ಯೂಸುಫ್‌ ಗಿಲಾನಿ ಒಟ್ಟಿಗೇ ಕೂತು ವೀಕ್ಷಿಸಿದರು. ಬಳಿಕ 2012ರಲ್ಲಿ ಭಾರತ-ಪಾಕ್‌ ನಡುವೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ಕೂಡಾ ನಡೆಯಿತು. ಇತ್ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿದ್ದು ಅದೇ ಕೊನೆ ಬಾರಿ.

ಪಂಜಾಬ್ ವಿವಿಯಲ್ಲಿ ಕಳೆದ ಕ್ಷಣ ಜೀವನದ ಸಂತಸದ ಸಮಯ

ಮನಮೋಹನ್ ಸಿಂಗ್ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಅಲ್ಲಿನ ಉಪನ್ಯಾಸಕರ ಪ್ರೋತ್ಸಾಹದಿಂದ ಕೇಂಬ್ರಿಡ್ಜ್‌ ವಿವಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಕೂಡ ತೆರಳಿದ್ದರು. ಪಂಜಾಬ್ ವಿವಿಯಲ್ಲಿ ಕಳೆದ ಕ್ಷಣವು ತಮ್ಮ ಜೀವನದ ಅತ್ಯಂತ ಸಂತಸದ ಸಮಯ ಎಂದು ಸಿಂಗ್ ಬಣ್ಣಿಸಿದ್ದರು. ಸ್ವಾತಂತ್ಯ ನಂತರದ ವಿಶ್ವವಿದ್ಯಾನಿಲಯದ ಅತ್ಯಂತ ಹಳೆಯ , ಪ್ರತಿಷ್ಠಿತ ವಿದ್ಯಾರ್ಥಿಯಾಗಿದ್ದ ಸಿಂಗ್ ಅವರಿಗೆ ಗೌರವಿಸಲಾಗಿತ್ತು. ಈ ವೇಳೆ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾನಿಲಯ ಮತ್ತು ಅಮೃತಸರದ ಹಿಂದೂ ಕಾಲೇಜಿನಲ್ಲಿ ತಮ್ಮ ದಿನಗಳನ್ನು ನೆನಪಿಸಿಕೊಂಡಿದ್ದರು. ಆ ಬಳಿಕ ವಿವಿಯಲ್ಲಿ ಸಿಂಗ್ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದರು. ಕೇಂಬ್ರಿಡ್ಜ್‌ನಿಂದ 1957 ರಲ್ಲಿ ಹಿರಿಯ ಉಪನ್ಯಾಸಕರಾಗಿ ಹಿಂದಿರುಗಿದ ಸಿಂಗ್, 1966 ರವರೆಗೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಬೋಧಿಸಿದರು. 33ರ ಹರೆಯದ ಹೊತ್ತಿಗೆ ತಮ್ಮ ಕೌಶಲ್ಯದಿಂದ ಸಿಂಗ್ ಪೂರ್ಣಪ್ರಮಾಣದ ಪ್ರಾಧ್ಯಾಪಕರಾಗಿದ್ದರು.

2012ರ ಆಪರೇಷನ್‌ ಬಳಿಕ ದೈಹಿಕವಾಗಿ ಚೇತರಿಕೆ ಕಾಣದ ಮಾಜಿ ಪ್ರಧಾನಿ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ 2012ರಲ್ಲಿ ರಕ್ತನಾಳದ ಹಲವು ಕಡೆ ಕಾಣಿಸಿಕೊಂಡಿದ್ದ ಬ್ಲಾಕೇಜ್‌ ತೆರವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದಾದ ಬಳಿಕ ಅವರ ಒಟ್ಟಾರೆ ದೈಹಿಕ ಪರಿಸ್ಥಿತಿ ಕುಂಠಿತಗೊಂಡಿತ್ತು. ಬಳಿಕ ಅವರು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡೇ ಇರಲಿಲ್ಲ.

ವೈದ್ಯಕೀಯ ಕೋರ್ಸ್ ಬಿಟ್ಟು ಅರ್ಥಶಾಸ್ತ್ರ ನೆಚ್ಚಿದ್ದ ಸಿಂಗ್‌

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ತಮ್ಮ ತಂದೆಯ ಇಚ್ಛೆಯಂತೆ ಪೂರ್ವ ವೈದ್ಯಕೀಯ ಕೋರ್ಸ್‌ಗೆ ದಾಖಲಾಗಿದ್ದರು. ಆದರೆ ಆ ವಿಷಯದಲ್ಲಿ ಆಸಕ್ತಿ ಕಳೆದುಕೊಂಡ ಕಾರಣ ಕೆಲವೇ ತಿಂಗಳಲ್ಲಿ ಕೋರ್ಸ್‌ ಕೈಬಿಟ್ಟಿದ್ದರು. ಸಿಂಗ್‌ ಅವರನ್ನು ಅರ್ಥಶಾಸ್ತ್ರದ ವಿಷಯ ಸೆಳೆಯುತ್ತಿತ್ತು. ‘ನನಗೆ ಬಡತನದ ವಿಷಯದಲ್ಲಿ ಸದಾ ಆಸಕ್ತಿಯಿತ್ತು. ಕೆಲವು ದೇಶಗಳು ಬಡವೇಕೆ, ಕೆಲವು ಶ್ರೀಮಂತವೇಕೆ? ಈ ಪ್ರಶ್ನೆಗಳನ್ನು ಕೇಳುವ ವಿಷಯವೇ ಅರ್ಥಶಾಸ್ತ್ರ ಎಂದು ನನಗೆ ಹೇಳಲಾಗಿತ್ತು’ ಎಂದು ಸಿಂಗ್‌ ಅವರ ಪುತ್ರಿ ತಮ್ಮ ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ. ಇನ್ನೂ ವಿಚಿತ್ರವೆಂದರೆ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾಗ ಅವರನ್ನು ಕಾಡುತ್ತಿದ್ದ ಸಮಸ್ಯೆಯೇ ಹಣಕಾಸಿನದ್ದು ಎಂದೂ ಆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಆರ್‌ಬಿಐ ಗವರ್ನರ್‌, 2 ಬಾರಿ ಪ್ರಧಾನಿಯಾಗಿ ದೇಶ ಮುನ್ನಡೆಸಿದ್ದ ಸಿಂಗ್‌

 ಮಹಾಮೌನಿಯದ್ದು ಸಾಧನೆಯೇ ಮಾತು

ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆ ಶಾಶ್ವತ

ಹಿರಿಯ ಸಹದ್ಯೋಗಿ, ಸೌಮ್ಯ ಬುದ್ಧಿಜೀವಿ, ಭಾರತದ ಆಕಾಂಕ್ಷೆಗಳನ್ನು ಸಾಕಾರಗೊಳಿಸಿದ ವಿನಮ್ರ ಆತ್ಮವನ್ನು ಕಳೆದುಕೊಂಡಿದ್ದೇವೆ. ಮನಮೋಹನ್ ಸಿಂಗ್ ಅವರ ಆರ್ಥಿಕ ಉದಾರೀಕರಣ ನೀತಿ ಮತ್ತು ಹಕ್ಕುಗಳ ಆಧಾರಿತ ಕಲ್ಯಾಣ ಕೋಟಿಗಟ್ಟಲೆ ಜನರ ಜೀವನವನ್ನು ಗಾಢವಾಗಿ ಪರಿವರ್ತಿಸಿತು. ಭಾರತವು ದೂಷಣೆ ಮಾಡಲು ಸಾಧ್ಯವಾಗದ, ದೂರದೃಷ್ಟಿಯ ರಾಜಕಾರಣಿಯನ್ನು ಕಳೆದುಕೊಂಡಿದೆ. ಮಾತಿಗಿಂತ ಕ್ರಿಯಾಶೀಲ ವ್ಯಕ್ತಿ. ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಪಾರ ಕೊಡುಗೆ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಭಾರತದ ಬೆಳವಣಿಗೆಗೆ ನಾಂದಿ ಹಾಡಿದ ನಿರಂತರ ಪರಂಪರೆ. ಕಲ್ಯಾಣದ ನೀತಿಗಳನ್ನು ಶಾಶ್ವತವಾಗಿ ಪಾಲಿಸಲಾಗುವುದು.

ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಆರ್ಥಿಕ ನೀತಿ ಮೇಲೆ ಬಲವಾದ ಮುದ್ರೆ ಒತ್ತಿದ್ದರು: ಮೋದಿ

ಭಾರತವು ತನ್ನ ಗೌರವಾನ್ವಿತ ನಾಯಕರಲ್ಲಿ ಒಬ್ಬರಾದ ಡಾ. ಮನ್‌ಮೋಹನ್ ಸಿಂಗ್ ಅವರನ್ನು ಕಳೆದುಕೊಂಡಿದ್ದಕ್ಕೆ ಕಂಬನಿ ಮಿಡಿಯುತ್ತದೆ. ಸಾಧಾರಣ ಹಿನ್ನೆಲೆಯಿಂದ ಬಂದ ಅವರು, ಗೌರವಾನಿತ್ವ ಅರ್ಥಶಾಸ್ತ್ರಜ್ಞರಾಗಿ ಬೆಳೆದಿದ್ದರು. ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. ಹಣಕಾಸು ಸಚಿವರಾಗಿ ನಮ್ಮ ಆರ್ಥಿಕ ನೀತಿಯ ಮೇಲೆ ಬಲವಾದ ಮುದ್ರೆಯನ್ನು ಒತ್ತಿದ್ದರು. ಸಂಸತ್ತಿನಲ್ಲಿ ಅವರ ಮಧ್ಯಸ್ಥಿಕೆಗಳು ಸಹ ಒಳನೋಟವುಳ್ಳವಾಗಿದ್ದವು. ನಮ್ಮ ಪ್ರಧಾನಿಯಾಗಿ ಅವರು ಜನರ ಜೀವನವನ್ನು ಸುಧಾರಿಸಲು ವ್ಯಾಪಕ ಪ್ರಯತ್ನಗಳನ್ನು ಮಾಡಿದ್ದರು.

- ನರೇಂದ್ರ ಮೋದಿ, ಪ್ರಧಾನಿ