ಸಾರಾಂಶ
ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಲೋಕಸಭಾ ಸ್ಪೀಕರ್ ಆಗಿದ್ದ ಮನೋಹರ್ ಜೋಶಿ (86) ಹೃದಯ ಸ್ತಂಭನದಿಂದ ನಗರದ ಹಿಂದೂಜಾ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ವಿಧಿವಶರಾದರು.
ಇವರನ್ನು ಕಳೆದ ವರ್ಷವಷ್ಟೇ ಮೆದುಳಿನ ರಕ್ತಸ್ರಾವದ ಕಾರಣ ಆಸ್ಪತ್ರೆಗೆ ದಾಖಲಿಸಿ ದೀರ್ಘಾವಧಿಯ ಚಿಕಿತ್ಸೆ ಕೊಡಿಸಲಾಗಿತ್ತು. ಮೃತರ ಅಂತ್ಯಕ್ರಿಯೆಯನ್ನು ದಾದರ್‌ನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ನೆರವೇರಿಸಲಾಗಿದೆ.
ಶಿವಸೇನೆಯ ಮೊದಲ ಸಿಎಂ ಎಂಬ ಖ್ಯಾತಿ ಪಡೆದಿದ್ದ ಜೋಶಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಆದಿಯಾಗಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದು, ‘ಮಹಾರಾಷ್ಟ್ರದ ಸುಸಂಕೃತ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.
ಶಿವಸೇನೆಯ ಮೊದಲ ಸಿಎಂ:1937ರಲ್ಲಿ ಜನಿಸಿದ ಇವರು ಮುಂಬೈನ ಖ್ಯಾತ ಜೀಜಾಬಾಯಿ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು.
ಆರ್‌ಎಸ್‌ಎಸ್ ಧುರೀಣರಾಗಿದ್ದ ಮನೋಹರ್ ಜೋಶಿ 1967ರಲ್ಲಿ ಮುಂಬೈ ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗುವ ಮೂಲಕ ರಾಜಕಾರಣ ಪ್ರವೇಶಿಸಿದ್ದರು.
ಬಳಿಕ ನಗರದ ಮೇಯರ್, ಶಾಸಕ, ಪ್ರತಿಪಕ್ಷ ಸ್ಥಾನ ಮುಂತಾದ ಸ್ಥಾನಗಳನ್ನು ಅಲಂಕರಿಸಿದ್ದರು. ಬಳಿಕ ಶಿವಸೇನೆ ಪ್ರವೇಶಿಸಿ 1995ರಲ್ಲಿ ಮೊದಲ ಬಾರಿಗೆ ಶಿವಸೇನೆ ಪಕ್ಷದಿಂದ ಮುಖ್ಯಮಂತ್ರಿಯಾಗಿ 1999ರವರೆಗೂ ಅಧಿಕಾರ ನಿರ್ವಹಿಸಿದ್ದರು.
ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಬೃಹತ್ ಕೈಗಾರಿಕೆ ಸಚಿವರಾಗಿ, 2002ರಿಂದ ಲೋಕಸಭಾ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.